ADVERTISEMENT

ವಿಧಾನ ಪರಿಷತ್: ಕಾಂಗ್ರೆಸ್ ಸದಸ್ಯರ ಕಡೆ ನುಗ್ಗಿದ ರವಿಕುಮಾರ್, ಮುನಿರಾಜುಗೌಡ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2024, 23:45 IST
Last Updated 28 ಫೆಬ್ರುವರಿ 2024, 23:45 IST
<div class="paragraphs"><p>ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರ ಕಡೆಗೆ ಏರಿಹೋದ ವಿರೋಧ ಪಕ್ಷದ ಮುಖ್ಯಸಚೇತಕ ಎನ್. ರವಿಕುಮಾರ್(ಕೇಸರಿ ಶಾಲು ಹೊದ್ದವರು) ಮತ್ತು ತುಳಸಿ ಮುನಿರಾಜುಗೌಡ. ಕಾಂಗ್ರೆಸ್ ಸದಸ್ಯರಿಗೆ ಸೂಚನೆ ನೀಡುತ್ತಿರುವ ಸಭಾಪತಿ ಬಸವರಾಜ ಹೊರಟ್ಟಿ&nbsp; </p></div>

ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರ ಕಡೆಗೆ ಏರಿಹೋದ ವಿರೋಧ ಪಕ್ಷದ ಮುಖ್ಯಸಚೇತಕ ಎನ್. ರವಿಕುಮಾರ್(ಕೇಸರಿ ಶಾಲು ಹೊದ್ದವರು) ಮತ್ತು ತುಳಸಿ ಮುನಿರಾಜುಗೌಡ. ಕಾಂಗ್ರೆಸ್ ಸದಸ್ಯರಿಗೆ ಸೂಚನೆ ನೀಡುತ್ತಿರುವ ಸಭಾಪತಿ ಬಸವರಾಜ ಹೊರಟ್ಟಿ 

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ಏಕವಚನ ಬಳಸಿದ್ದಾರೆ ಎಂದು ಸಿಟ್ಟಿಗೆದ್ದ ವಿರೋಧ ಪಕ್ಷದ ಮುಖ್ಯಸಚೇತಕ ಎನ್.ರವಿಕುಮಾರ್ ಹಾಗೂ ಬಿಜೆಪಿಯ ತುಳಸಿ ಮುನಿರಾಜುಗೌಡ ಅವರು ಕಾಂಗ್ರೆಸ್‌ನ ಅಬ್ದುಲ್ ಜಬ್ಬಾರ್‌ ವಿರುದ್ಧ ಅಬ್ಬರಿಸುತ್ತಾ ಅವರ ಕಡೆಗೆ ಏರಿಹೋದ ಘಟನೆಗೆ ಪ್ರಜ್ಞಾವಂತರ ಸದನವೆಂದೇ ಗುರುತಿಸಲ್ಪಡುವ ವಿಧಾನಪರಿಷತ್ ಬುಧವಾರ ಸಾಕ್ಷಿಯಾಯಿತು.

ADVERTISEMENT

‘ಪಾಕಿಸ್ತಾನ್ ಜಿಂದಾಬಾದ್‌’ ಎಂದು ಘೋಷಣೆ ಕೂಗಲಾಗಿದೆ ಎಂಬ ಆರೋಪದ ಕುರಿತು ಚರ್ಚೆ ನಡೆಯುತ್ತಿತ್ತು. ಕಾಂಗ್ರೆಸ್‌ ಸರ್ಕಾರ ದೇಶದ್ರೋಹಿ, ಭಯೋತ್ಪಾದಕರ ಪರವಾಗಿದೆ ಎಂದು ರವಿಕುಮಾರ್‌ ದೂರಿದರು. ಇದನ್ನು ಕಾಂಗ್ರೆಸ್ ಸದಸ್ಯರು ಬಲವಾಗಿ ಆಕ್ಷೇಪಿಸಿದರು. ಈ ವಿಷಯದಲ್ಲಿ ಏರಿದ ಧ್ವನಿಯಲ್ಲಿ ವಾಗ್ವಾದ ನಡೆಯಿತು. ಸಭಾಪತಿ ಸೂಚನೆ ಬಳಿಕ, ಗದ್ದಲ ಕಡಿಮೆಯಾದಾಗ ರವಿಕುಮಾರ್ ಮಾತು ಆರಂಭಿಸಿದರು.

ಆಗ ಮಧ್ಯಪ್ರವೇಶಿಸಿದ ಅಬ್ದುಲ್ ಜಬ್ಬಾರ್, ‘ಅವನಿಗೆ ಮಾತನಾಡಲು ಬಿಟ್ಟರೆ ನಿಲ್ಲಿಸುವುದೇ ಇಲ್ಲ. ಮಾತನಾಡಲು ಬಿಡಬೇಡಿ ಸಭಾಪತಿಗಳೇ’ ಎಂದು ಹೇಳಿದರು. ಇದನ್ನು ಕೇಳುತ್ತಿದ್ದಂತೆಯೇ, ‘ಏಕವಚನ ಬಳಸಬೇಡಿ. ಗೌರವಯುತವಾಗಿ ಮಾತನಾಡಿ’ ಎಂದು ರವಿಕುಮಾರ್ ಕೋರಿದರು. ‘ಮಾತನಾಡುತ್ತಲೇ ಇದ್ದೀರಲ್ಲ; ಇನ್ನೂ ಹೇಗೆ ಹೇಳಬೇಕು’ ಎಂದು ಜಬ್ಬಾರ್ ಪ್ರಶ್ನಿಸಿದರು.

ಇದರಿಂದ ಕೆರಳಿದ ರವಿಕುಮಾರ್‌, ‘ನೀವು ಮಾತನಾಡುತ್ತಿರುವುದು ಸರಿಯಲ್ಲ’ ಎಂದರು. ಮಾತಿಗೆ ಮಾತು ಬೆಳೆದು ಏನೂ ಕೇಳಿಸದಷ್ಟು ಸದ್ದು ಜೋರಾಯಿತು. ಆಗ ರೊಚ್ಚಿಗೆದ್ದ ರವಿಕುಮಾರ್, ‘ಏನು ನೀವು ಹೇಳುವುದು? ಏನು ಮಾಡುತ್ತೀರಿ ನೋಡುತ್ತೇನೆ’ ಎಂದು ತಮ್ಮ ಆಸನದ ಬಳಿಯಿಂದ ಕಾಂಗ್ರೆಸ್‌ ಸದಸ್ಯರ ಕಡೆಗೆ ನುಗ್ಗಿದರು. ಬಿಜೆಪಿಯ ತುಳಸಿ ಮುನಿರಾಜುಗೌಡ ಅವರಿಗೆ ಜತೆಯಾದರು. ಇಬ್ಬರೂ ಅಬ್ಬರಿಸುತ್ತ ಸಭಾಪತಿ ಪೀಠದ ಎದುರಿಗೆ ಬುಸುಗುಡುತ್ತಾ ನಡೆದರು. ಸಭಾಪತಿ ಪೀಠದ ಎದುರು ಕುಳಿತಿದ್ದ ಸಚಿವಾಲಯದ ಸಿಬ್ಬಂದಿ ಗಾಬರಿಯಿಂದ ಎದ್ದು ನಿಂತರು. ಕಾಂಗ್ರೆಸ್ ಸದಸ್ಯರು ಅಬ್ಬರಿಸುತ್ತಾ ಮುಂದಿನ ಸಾಲಿನ ಕಡೆಗೆ ಬರತೊಡಗಿದರು.

ಅಷ್ಟರಲ್ಲೇ ಎಚ್ಚರಗೊಂಡ ಪರಿಷತ್ತಿನ ಭದ್ರತಾ ಮುಖ್ಯಸ್ಥರು ಹೊರಗಿದ್ದ ತಮ್ಮೆಲ್ಲ ಸಹೋದ್ಯೋಗಿಗಳನ್ನು ಕರೆಯಿಸಿ ಯಾರೊಬ್ಬರೂ ಅತ್ತಿತ್ತ ಹೋಗದಂತೆ ಸಭಾಪತಿ ಪೀಠದ ಎದುರು ಭದ್ರಕೋಟೆ ರಚಿಸಿದರು. ಎರಡೂ ಪಕ್ಷಗಳವರು ಪರಸ್ಪರರನ್ನು ದೂಷಿಸುತ್ತಾ ಕೂಗುತ್ತಲೇ ಇದ್ದರು. ಮುನ್ನುಗ್ಗುತ್ತಿದ್ದ ರವಿಕುಮಾರ್ ಅವರನ್ನು, ಭದ್ರತಾ ಮುಖ್ಯಸ್ಥರು ಹಿಡಿದು ನಿಂತರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಮುಂದೂಡಿದರು.

ಜಬ್ಬಾರ್ ಕ್ಷಮೆ– ಕ್ಷಮೆಯಾಚಿಸದ ರವಿಕುಮಾರ್

ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ರವಿಕುಮಾರ್ ಮಾತನಾಡಲು ಮುಂದಾದರು. ಮಧ್ಯಪ್ರವೇಶಿಸಿದ ಸಭಾಪತಿ ಹೊರಟ್ಟಿ, ಹೀಗೆ ಏಕವಚನ ಬಳಸುವುದು, ಬೇಕಾಬಿಟ್ಟಿ ಮಾತನಾಡಿದರೆ ಸದನ ನಡೆಸಲು ಆಗುವುದಿಲ್ಲ. ಎಲ್ಲರೂ ಸೌಜನ್ಯದಿಂದ ವರ್ತಿಸಬೇಕು. ಸಭಾಪತಿ ಎದ್ದು ನಿಂತರೂ ಮಾತು ನಿಲ್ಲಿಸದೇ ಇದ್ದರೆ ಹೇಗೆ ಎಂದು ಅಸಮಾಧಾನ ಹೊರಹಾಕಿದರು.

ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ, ಭಾವಾವೇಶದಿಂದಾಗಿ ಕೆಲವೊಮ್ಮೆ ಸದನದ ಮರ್ಯಾದೆ ರೇಖೆಯ ದಾಟಿ ಏನೇನೋ ನಡೆದುಹೋಗುತ್ತದೆ. ಇಂದು ನಡೆದ ಘಟನೆ ಎಲ್ಲರನ್ನೂ ನೋಯಿಸಿದೆ. ಈ ಭಾಗದ ಸದಸ್ಯರು ಶಾಸಕರಿಗೆ ಗೌರವಕ್ಕೆ ಮೀರಿದ ಪದ ಬಳಸಿದ್ದು ಕೇಳಿಸಿಕೊಂಡಿದ್ದೇವೆ. ಅವರು ವಾಪಸ್ ಪಡೆದು ತಮ್ಮ ಭಾವನೆ ಹೇಳಬೇಕು. ಸರ್ಕಾರವನ್ನು ದೇಶದ್ರೋಹಿ ಎಂದು ಹೇಳಿರುವುದು ಸರಿಯಲ್ಲ. ಇಬ್ಬರೂ ಆತ್ಮಾವಲೋಕನ ಮಾಡಿಕೊಂಡು ಹೇಳಿಕೆ ವಾಪಸ್ ಪಡೆದು ವಿಷಾದ ವ್ಯಕ್ತಪಡಿಸಿದರೆ ಈ ಸದನದ ಗೌರವ, ಘನತೆ ಉಳಿಯುತ್ತದೆ ಎಂದರು.

‘ದೇಶದ ವಿಷಯ ಬಂದಾಗ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ. ದೇಶದ್ರೋಹಿಗಳಿಗೆ, ಪಾಕಿಸ್ತಾನದ ಪರ ಇರುವವರಿಗೆ ಬೆಂಬಲ ಕೊಡುವವರಿಗೆ ರಾಷ್ಟ್ರದ್ರೋಹಿ ಎನ್ನದೇ, ದೇಶಭಕ್ತ ಎನ್ನಲು ಸಾಧ್ಯವೇ? ಕ್ಷಮೆ ಕೇಳುವುದಿಲ್ಲ’ ಎಂದು ರವಿಕುಮಾರ್ ಹೇಳಿದರು.

‘ಕ್ಷಮೆ ಅಥವಾ ವಿಷಾದ ವ್ಯಕ್ತಪಡಿಸಿದರೆ ನಿಮ್ಮ ಘನತೆಗೇನೂ ಕುಂದು ಬರುವುದಿಲ್ಲ. ಕೇಳಿಬಿಡಿ. ಮುಂದುವರಿಸಿಕೊಂಡು ಹೋಗುವುದು ಬೇಡ. ಪ್ರತಿಷ್ಠೆ ಬೇಡ’ ಎಂದು ಸಭಾಪತಿ ಸಲಹೆ ನೀಡಿದರು. ಸಚಿವ ಪಾಟೀಲ ಧ್ವನಿಗೂಡಿಸಿದರು. ಆದರೂ ಅವರು ಒ‍ಪ್ಪಲಿಲ್ಲ.

ಬಳಿಕ ಮಾತನಾಡಿದ ಅಬ್ದುಲ್ ಜಬ್ಬಾರ್, ‘ತಮ್ಮ ಮಾತಿನಿಂದ ನೋವಾಗಿದ್ದರೆ ವಿಷಾದಿಸುತ್ತೇನೆ. ಆ ಮಾತು ಬಳಸಿದ್ದಕ್ಕೆ ಕ್ಷಮೆಯಾಚಿಸುತ್ತೇನೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.