ಪ್ರಿಯಾಂಕ್ ಖರ್ಗೆ
ಬೆಂಗಳೂರು: ಇಲಾಖೆಯ ಕಾರ್ಯಕ್ರಮ, ಯೋಜನೆ ಹಾಗೂ ಸರ್ಕಾರಿ ಮಾಹಿತಿಯನ್ನು ಸರಳವಾಗಿ ಜನರಿಗೆ ತಿಳಿಸುವ ‘ಗ್ರಾಮದನಿ’ ಪಾಡ್‌ಕಾಸ್ಟ್‌ಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಪ್ರಿಯಾಂಕ್, ಮಹತ್ವದ ವಿಷಯಗಳನ್ನು ಕೇಂದ್ರೀಕರಿಸಿ, ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಪಾರದರ್ಶಕತೆ ತರಲಾಗಿದೆ. ಆಡಳಿತವನ್ನು ಜನಸ್ನೇಹಿಯಾಗಿಸುವ ಪ್ರಯತ್ನದ ಭಾಗವಾಗಿ ಸರ್ಕಾರಿ ಪದಗಳನ್ನು ಸರಳವಾಗಿ ಜನರಿಗೆ ಅರ್ಥ ಮಾಡಿಸಲು ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ‘ಗ್ರಾಮದನಿ‘ ಸಿದ್ಧಪಡಿಸಿದೆ ಎಂದರು.
ಸಮುದಾಯಕ್ಕೆ ಮಾಹಿತಿ ಮತ್ತು ಅರಿವು ಮೂಡಿಸುವುದು ಅತ್ಯಂತ ಮುಖ್ಯವಾಗಿದೆ. ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಮಾಹಿತಿ ಕೊರತೆ ನೀಗಿಸಲು ತಂತ್ರಜ್ಞಾನವನ್ನು ಸಮರ್ಪಕ ಬಳಕೆ ಮಾಡಲಾಗುತ್ತಿದೆ. ಗ್ರಾಮದನಿ ಗ್ರಾಮೀಣ ಕರ್ನಾಟಕದ ಧ್ವನಿಯಾಗಲಿದ್ದು, ಶಕ್ತಿಯುತ ಅರಿವಿನ ಮಾಧ್ಯಮವಾಗಲಿದೆ. ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕದ ನಿಯಮಗಳು, ಡಿಜಿಟಲೀಕರಣ ಕುರಿತ ಮಾರ್ಗಸೂಚಿಗಳು, ಪಂಚತಂತ್ರ 2.0 ಸೇರಿದಂತೆ ಹಲವು ಉಪಯುಕ್ತ ಸುತ್ತೋಲೆಗಳು ಹಾಗೂ ಮಾರ್ಗಸೂಚಿಗಳನ್ನು ಪ್ರಸಾರ ಮಾಡಲಾಗುತ್ತದೆ. ಇದರಿಂದ ಆಡಳಿತ ಸುಧಾರಣೆಗೂ ಸಹಾಯವಾಗಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ತೆರಿಗೆ ತಾರತಮ್ಯ ಮುಂದುವರಿಸಿದೆ. ಕೇಂದ್ರಕ್ಕೆ ಕನ್ನಡಿಗರ ದುಡಿಮೆ ತೆರಿಗೆ ಬೇಕು. ವಾಪಸ್ ಕೊಡುವಾಗ ಕರ್ನಾಟಕ ಬೇಡವಾಗಿದೆ ಎಂದು ಪ್ರಿಯಾಂಕ್ ಖರ್ಗೆ ದೂರಿದರು.
‘ದೇಶದಲ್ಲಿ ಕೆಲವೇ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ತೆರಿಗೆ ನೀಡುತ್ತಿವೆ. ತೆರಿಗೆ ಕೊಡದ ರಾಜ್ಯಗಳಿಗೆ ಪಾಲು ಕೊಡಬೇಡಿ ಎಂದು ಹೇಳಿಲ್ಲ. ಆದರೆ ತಾರತಮ್ಯ ಮಾಡಬೇಡಿ ಎನ್ನುವುದು ನಮ್ಮ ಮನವಿ. ರಾಜ್ಯದ ಬಿಜೆಪಿ ಸಂಸದರು ಪುಕ್ಕಟೆ ಭಾಷಣ ಮಾಡುವ ಕೇಂದ್ರ ಸಚಿವರು ಈ ಕುರಿತು ಪ್ರಧಾನಿ ಬಳಿ ಧ್ವನಿ ಎತ್ತಬೇಕು’ ಎಂದು ಸಲಹೆ ನೀಡಿದರು.
‘ಕರ್ನಾಟಕದ ಹೂಡಿಕೆದಾರರಿಗೆ ಆಂಧ್ರಪ್ರದೇಶಕ್ಕೆ ಆಹ್ವಾನ ನೀಡಿರುವ ಅಲ್ಲಿನ ಸಚಿವ ನಾ.ರಾ.ಲೋಕೇಶ್ ಮೊದಲು ಅಮರಾವತಿ ನಿರ್ಮಾಣ ಕಾರ್ಯದತ್ತ ಚಿತ್ತಹರಿಸಲಿ. ಪ್ರಧಾನಿ ನರೇಂದ್ರ ಮೋದಿ ಅವರು ₹10 ಸಾವಿರ ಕೋಟಿ ಕೊಟ್ಟರೂ ಕೆಲಸ ಏಕೆ ಆಗಿಲ್ಲ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.