ADVERTISEMENT

ಹಳ್ಳಿಗರ ಆರೋಗ್ಯ ರಕ್ಷಣೆಗೆ ಕ್ರಮ ಏನು–ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 18:25 IST
Last Updated 7 ಜೂನ್ 2021, 18:25 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ರಾಜ್ಯದ ಗ್ರಾಮೀಣ ಜನರ ಆರೋಗ್ಯ ಕಾಪಾಡಲು ಯಾವ ರೀತಿಯಲ್ಲಿ ನೀತಿ ರೂಪಿಸಿದೆ ಅಥವಾ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಂಡಿದೆ. ಯಾವುದಾದರೂ ನೀತಿ ರೂಪಿಸಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಂದು ಸರ್ಕಾರಿ ಆಸ್ಪತ್ರೆ ತೆರೆಯಬೇಕೆಂದು ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಲು ಆದೇಶಿಸಿತು.

‘ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಆಸ್ಪತ್ರೆ ತೆರೆಯಬೇಕು ಎಂಬ ಆದೇಶ ನೀಡಿದರೂ. ಅದು ಸಾಧ್ಯವಾಗಲು ಬಹಳಷ್ಟು ದಿನಗಳು ಬೇಕಾಗಬಹುದು. ಆದರೂ, ಗ್ರಾಮೀಣ ಜನರ ಆರೋಗ್ಯದ ಹಕ್ಕು ಕಲ್ಪಿಸುವ ಸರ್ಕಾರದ ಜವಾಬ್ದಾರಿ ನೆನಪಿಸುವ ವಿಷಯ ಈ ಅರ್ಜಿಯಲ್ಲಿ ಎದ್ದಿದೆ. ಸಂವಿಧಾನದ 21ನೇ ಪರಿಚ್ಛೇದದ ಅಡಿಯಲ್ಲಿ ಆರೋಗ್ಯವೂ ಮೂಲಭೂತ ಹಕ್ಕು’ ಎಂದು ಪೀಠ ಹೇಳಿತು.

ADVERTISEMENT

ಗ್ರಾಮೀಣ ಪ್ರದೇಶಗಳಿಗೂ ಕೋವಿಡ್‌ ಹರಡುತ್ತಿರುವ ಸಂದರ್ಭದಲ್ಲಿ ಈ ಅರ್ಜಿ ಪ್ರಸ್ತುತವಾಗಿದೆ. ಈ ಸಂಬಂಧ ನೀತಿ ಅಥವಾ ನಿರ್ಧಾರ ಕೈಗೊಂಡಿದ್ದರೆ ಸರ್ಕಾರ ಒಂದು ತಿಂಗಳಲ್ಲಿ ಸಲ್ಲಿಸಬೇಕು ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಜುಲೈ 12‌ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.