ಬನ್ನಿಹಟ್ಟಿ (ಹಾವೇರಿ ಜಿಲ್ಲೆ): ‘ನಾಲ್ಕೂ ಮಕ್ಕಳು ಹುಟ್ಟಿದ ತಕ್ಷಣವೇ ಮೃತಪಟ್ಟಿದ್ದು, ಕುಟುಂಬ ಹೀಯಾಳಿಕೆಯೇ ಹೆಚ್ಚಾಯಿತು. ಪತಿ, ತವರು ಮನೆಗೆ ವಾಪಸ್ ಕಳುಹಿಸಿಯೇ ಬಿಟ್ಟನು. ತವರಿನಲ್ಲೂ ಆಸ್ತಿಪಾಸ್ತಿ ಇಲ್ಲ. ಬದುಕು ಬೀದಿಗೆ ಬಂತು...’
–ದಶಕದ ಹಿಂದಿನ ತನ್ನ ದುಸ್ಥಿತಿ ವಿವರಿಸುವಾಗ ಬ್ಯಾಡಗಿ ತಾಲ್ಲೂಕಿನ ಬನ್ನಿಹಟ್ಟಿಯ ನಾಗಮ್ಮ ಬಸಪ್ಪ ಮಲ್ಲಳ್ಳೇರಿ ಕಣ್ಣಾಲಿಗಳು ತುಂಬಿಕೊಂಡಿದ್ದವು. ಆದರೆ, ನಾಗಮ್ಮ ಮರುಗಿ ಕೂತವರಲ್ಲ. ಅವರೀಗ, ಹಳ್ಳಿಯ 50ಕ್ಕೂ ಹೆಚ್ಚು ಕುಟುಂಬಗಳಿಗೆ ಕೆಲಸ ಕೊಡಿಸುತ್ತಿರುವ ಮೇಟಿ. ಶೋಷಿತ ಮಹಿಳೆಯರಿಗೆ ಬದುಕು ಕಲ್ಪಿಸುತ್ತಿರುವ ದಿಟ್ಟ ಮಹಿಳೆ.
ತವರಿಗೆ ಹಿಂತಿರುಗಿದ ನಾಗಮ್ಮಅವರನ್ನು ಕನಿಷ್ಠ ಕೂಲಿಗೆ ದುಡಿದು ಕುಟುಂಬವನ್ನು ಸಲಹುತ್ತಿರುವ ಮಹಿಳೆಯರ ನೋವುಗಳು ಕಾಡತೊಡಗಿದವು. ಊರಿನ ಕೆಲವು ಮಹಿಳೆಯರು ಹೆಚ್ಚಿನ ಕೂಲಿಗಾಗಿ ಪಕ್ಕದ ಹಳ್ಳಿಗಳಿಗೆ ಹೋಗುತ್ತಿದ್ದರು. ಅವರನ್ನು ವಾಪಸ್ ಕರೆತಂದ ಊರಿನ ಶ್ರೀಮಂತನೊಬ್ಬ, ತನ್ನ ಹೊಲದಲ್ಲೇ ಕೆಲಸ ಮಾಡುವಂತೆ ಕರಾರು ಮಾಡಿಸಿಕೊಂಡಿದ್ದನು. ಈ ಬೆಳವಣಿಗೆ ವಿರದ್ಧ ಸಿಡಿದೆದ್ದ ನಾಗಮ್ಮ, ಶೋಷಣೆಯಿಂದ ಮಹಿಳೆಯರನ್ನು ಬಿಡುಗಡೆಗೊಳಿಸುವ ಪಣ ತೊಟ್ಟರು. ರೊಟ್ಟಿ ತಟ್ಟಿ, ಕೂಲಿನಾಲಿ ಮಾಡುತ್ತಿದ್ದ ಅವರು, ಸಂಘಟನೆಗೆ ಇಳಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿ ಅರ್ಜಿ ಹಾಕಿದರು. ಮೊದಲು ನಾಗಮ್ಮ ಬೇಡಿಕೆಗೆ ಗ್ರಾಮ ಪಂಚಾಯ್ತಿ ಸೊಪ್ಪು ಹಾಕಲಿಲ್ಲ. ಕಡೆಗೆ, ಊರ ಮಹಿಳೆಯರನ್ನು ಸಂಘಟಿಸಿ ಪಿಡಿಒರನ್ನು ತರಾಟೆಗೆ ತೆಗೆದುಕೊಂಡು ‘ವರ್ಕ್ ಆರ್ಡರ್’ ಮಂಜೂರು ಮಾಡಿಸಿಕೊಂಡರು. ಕ್ರಮೇಣ ಕೆಲಸಕ್ಕೆ ತಾವೇ‘ಮೇಟಿ’ಯಾದರು. ಊರಿನ ಚರಂಡಿ ಸ್ವಚ್ಛತೆ, ಹಳ್ಳ, ಕಾಲುವೆ ನಿರ್ಮಾಣ ಮತ್ತಿತರ ಕೂಲಿ ಕೆಲಸಗಳು ಸಿಕ್ಕವು.₹82ಕ್ಕೆ ದುಡಿಯುತ್ತಿದ್ದ ಮಹಿಳೆಯರಿಗೆ, ₹234 ಕೂಲಿ ಸಿಕ್ಕಿತು. ಕ್ರಮೇಣ ಮಹಿಳೆಯರ ಪತಿಯಂದಿರೂ ಕೆಲಸಕ್ಕೆ ಬರಲು ಶುರು ಮಾಡಿದರು.
‘ಮಹಿಳೆಯರೇ ಸೇರಿ ಸ್ವಸಹಾಯ ಸಂಘ ಸ್ಥಾಪಿಸಿದೆವು. ವಾರಕ್ಕೆ ₹100 ಉಳಿತಾಯ ಮಾಡಿದೆವು. ಇದನ್ನು ಕಂಡ ಹಣಕಾಸು ಸಂಸ್ಥೆಗಳು ಸಹಾಯ ಮಾಡಿದವು.ಅದರಿಂದ ಆಡು, ಕುರಿ, ದನ ಖರೀದಿಸಿ ಉಪಕಸುಬು ಆರಂಭಿಸಿದ್ದೇವೆ’ ಎಂದರು.
****
ನಮ್ಮಂತಹ ಸಂಸ್ಥೆಗಳು ಮಾಹಿತಿ, ಜಾಗೃತಿ ಹಾಗೂ ತರಬೇತಿ ನೀಡಬಹುದು. ಆದರೆ, ನಾಗಮ್ಮ ಅವರ ಸಂಘಟನೆ, ಶ್ರಮ ಹಾಗೂ ಕೆಲಸಗಳ ಮಾದರಿಯು ಎಲ್ಲೆಡೆ ಬೇಕಾಗಿದೆ.
– ಎಸ್.ಡಿ. ಬಳಿಗಾರ
ಸಿಇಒ, ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ರಾಣೆಬೆನ್ನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.