ADVERTISEMENT

ಹೆರಿಗೆ ಆಸ್ಪತ್ರೆ ಕಟ್ಟಿಸುವ ಬಗ್ಗೆ ಹೇಳಿಕೆ: ಆರ್.ವಿ.ದೇಶಪಾಂಡೆ ಕ್ಷಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 16:03 IST
Last Updated 3 ಸೆಪ್ಟೆಂಬರ್ 2025, 16:03 IST
ಆರ್.ವಿ.ದೇಶಪಾಂಡೆ
ಆರ್.ವಿ.ದೇಶಪಾಂಡೆ   

ಬೆಂಗಳೂರು: ‘ಹೆರಿಗೆ ಆಸ್ಪತ್ರೆ ಕಟ್ಟಿಸುವ ಬಗ್ಗೆ ಪತ್ರಕರ್ತೆ ಕೇಳಿದ ಪ್ರಶ್ನೆಗೆ ಆರ್‌.ವಿ.ದೇಶಪಾಂಡೆ ಅವರು, ‘ನಿನಗೆ ಹೆರಿಗೆ ಆಗುವಾಗ ಕಟ್ಟಿಸುತ್ತೇನೆ’ ಎಂದಿರುವುದು ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆ. ಅವರು ಕ್ಷಮೆ ಕೇಳಬೇಕು’ ಎಂದು ಕರ್ನಾಟಕ ಪತ್ರಕರ್ತೆಯರ ಸಂಘವು ಆಗ್ರಹಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಸಂಘವು, ‘ಆರ್.ವಿ.ದೇಶಪಾಂಡೆ ಅವರು ಹಿರಿಯರಾಗಿ, ಮಾಜಿ ಸಚಿವರಾಗಿ, ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು ಇಂತಹ ಉಡಾಫೆಯ ಹೇಳಿಕೆ ನೀಡಬಾರದಾಗಿತ್ತು. ಸಮಾಜದ ಪರವಾಗಿ ಪ್ರಶ್ನೆಯನ್ನು ಎತ್ತಿದ ಪತ್ರಕರ್ತೆಗೆ ಜವಾಬ್ದಾರಿಯಿಂದ ಉತ್ತರಿಸಬೇಕಿತ್ತು. ಅವರ ಈ ನಡೆಯನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ’ ಎಂದಿದೆ.

‘ಹೆಣ್ಣು ಮಕ್ಕಳ ಮೂಲಭೂತ ಸೌಲಭ್ಯದ ಕೊರತೆಯನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ರಾಜಕಾರಣಿಗಳು ಪತ್ರಕರ್ತೆಯರನ್ನು ಹಗುರವಾಗಿ ಪರಿಗಣಿಸಬಾರದು ಮತ್ತು ಹೆಣ್ಣು ಮಕ್ಕಳ ಮೂಲಭೂತ ಸೌಲಭ್ಯದ ಬಗ್ಗೆ ಉಡಾಫೆಯ ಮಾತು ಸಲ್ಲದು’ ಎಂದು ಸಂಘವು ಹೇಳಿದೆ.

ADVERTISEMENT

ಕ್ಷಮೆಗೆ ಆಗ್ರಹ: ‘ಹೆರಿಗೆ ಆಸ್ಪತ್ರೆಯ ಸೌಲಭ್ಯ ದೊರಕಿಸಲು ವಿಫಲರಾಗಿರುವ ದೇಶಪಾಂಡೆ ಅವರು ಪತ್ರಕರ್ತರ ಮತ್ತು ಹೆಣ್ಣುಮಕ್ಕಳ ಘನತೆಗೆ ಧಕ್ಕೆ ಆಗುವ ರೀತಿಯ ಮಾತನಾಡಿರುವುದು ಸರಿಯಲ್ಲ. ಕೂಡಲೇ ಅವರು ಕ್ಷಮೆ ಕೇಳಬೇಕು’ ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.