ADVERTISEMENT

ಲೂಟಿಕೋರರಿಗೆ ಶಿಕ್ಷೆ ಆಗುವವರೆಗೂ ಬಿಡಲ್ಲ: ಎಸ್‌ಆರ್‌ ಹಿರೇಮಠ

75ನೇ ವರ್ಷಕ್ಕೆ ಕಾಲಿಟ್ಟ ಎಸ್‌.ಆರ್‌.ಹಿರೇಮಠ ಅವರಿಗೆ ಬೆಂಗಳೂರಿನಲ್ಲಿ ಇಂದು ಸನ್ಮಾನ

ಬಿ.ಎನ್.ಶ್ರೀಧರ
Published 8 ನವೆಂಬರ್ 2019, 19:30 IST
Last Updated 8 ನವೆಂಬರ್ 2019, 19:30 IST
ಎಸ್‌.ಆರ್‌.ಹಿರೇಮಠಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಎಸ್‌.ಆರ್‌.ಹಿರೇಮಠಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌   

ಹುಬ್ಬಳ್ಳಿ: ಅಕ್ರಮ ಗಣಿಗಾರಿಕೆ ಸೇರಿದಂತೆ ನೈಸರ್ಗಿಕ ಸಂಪತ್ತಿನ ಲೂಟಿ ತಡೆಯಲು ರಾಷ್ಟ್ರಮಟ್ಟದಲ್ಲಿ ಅವಿರತ ಹೋರಾಟ ನಡೆಸುತ್ತಿರುವ ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ, ನ.5ಕ್ಕೆ 75ನೇ ವರ್ಷಕ್ಕೆ ಕಾಲಿಟ್ಟರು.

ದೇಹಕ್ಕೆ ವಯಸ್ಸಾಗಿದ್ದರೂ ಮನಸ್ಸು–ಉತ್ಸಾಹಕ್ಕೆ ವಯಸ್ಸಾಗಿಲ್ಲ ಎಂದೇ ಮಾತು ಆರಂಭಿಸುವ ಅವರು, ಕೊನೆಯುಸಿರು ಇರುವವರೆಗೂ ತಮ್ಮ ಜನಪರ ಹೋರಾಟ ನಿಲ್ಲುವುದಿಲ್ಲ ಎನ್ನುತ್ತಾರೆ.

ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರಿನ ಗಾಂಧಿ ಭವನದಲ್ಲಿ ಶನಿವಾರ(ನ.9) ಹಿರೇಮಠರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಿವೆ.

ADVERTISEMENT

* ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟ ಆರಂಭವಾಗಿದ್ದು ಹೇಗೆ?
2007–08ರಲ್ಲಿ ಬಳ್ಳಾರಿಯ ಕೆಲವರು ಬಂದು ಅಕ್ರಮ ಗಣಿಗಾರಿಕೆ ಬಗ್ಗೆ ನನಗೆ ತಿಳಿಸಿದರು. ಅದರ ನಂತರ, ಸ್ಥಳೀಯರ ಪಾಲುದಾರಿಕೆ ಮುಖ್ಯ ಎಂಬ ಕಾರಣಕ್ಕೆ ಅಲ್ಲಿನ ಜನರನ್ನು ಹೋರಾಟದಲ್ಲಿ ಸೇರಿಸಿಕೊಳ್ಳಲಾಯಿತು. ಅಕ್ರಮಗಳ ಕೇಂದ್ರಬಿಂದುವಾಗಿದ್ದ ಸಂಡೂರಿನಿಂದಲೇ ನಮ್ಮ ಹೋರಾಟ ಆರಂಭವಾಯಿತು. ಜನರು ಆರಂಭದಲ್ಲಿ ದೂಳು, ರಸ್ತೆಗೆ ನೀರು ಹಾಕಿಸದೇ ಇರುವಂತಹ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ಮಾತ್ರ ಹೇಳುತ್ತಿದ್ದರು. ನಾವು ಅದರಾಚೆ ಯೋಚನೆ ಮಾಡಿದ ಮೇಲೆ ನೈಸರ್ಗಿಕ ಸಂಪತ್ತಿನ ಲೂಟಿ ತಡೆಯಲು ಸಾಧ್ಯವಾಯಿತು. ಯಶಸ್ವಿಯೂಆಯಿತು.

* ನಿಮ್ಮ ಹೋರಾಟದಿಂದ ಕೆಲವರು ಜೈಲಿಗೆ ಹೋಗಿ ಬಂದಿರಬಹುದು. ಆದರೆ, ಪ್ರಕರಣಗಳು ತಾರ್ಕಿಕ ಅಂತ್ಯ ಕಾಣುತ್ತವೆ ಎಂದು ನಿಮಗೆ ಅನಿಸುತ್ತದೆಯೇ?
ಅನುಮಾನ ಏಕೆ? ತಾರ್ಕಿಕ ಅಂತ್ಯ ಕಾಣುವವರೆಗೂ ವಿರಮಿಸುವುದಿಲ್ಲ. ಲೂಟಿಕೋರರಿಗೆ ಶಿಕ್ಷೆ ಆಗಲೇಬೇಕು. ಅಕ್ರಮಕ್ಕೆ ಸಾಕಷ್ಟು ಪುರಾವೆಗಳು ಇವೆ. ಸಿಇಸಿ, ಲೋಕಾಯುಕ್ತ ವರದಿ ಇದೆ. ಮತ್ತೇನು ಬೇಕು ಹೇಳಿ?

* ಈ ಹೋರಾಟ ನಿಮಗೆ ತೃಪ್ತಿ ತಂದಿದೆಯೇ?
ನಿಜವಾದ ಸಂತೃಪ್ತಿ ಗುರಿ ಮುಟ್ಟಿದಾಗ ಇರದು. ಆದರೆ, ಆ ಇಡೀ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಇರುತ್ತದೆ ಎಂದು ನಂಬಿದವ ನಾನು.

* ಇಂದಿನ ಚುನಾವಣಾ ರಾಜಕಾರಣದ ಬಗ್ಗೆ ಏನು ಹೇಳುವಿರಿ?
ಭೀತಿ ಹುಟ್ಟಿಸುವಷ್ಟು ಹಾಳಾಗಿದೆ. ಹಣ, ದಬ್ಬಾಳಿಕೆ ಹೆಚ್ಚಾಗಿವೆ. ಇವನ್ನು ಸರಿ ಮಾಡದಿದ್ದರೆ ಪ್ರಜಾಪ್ರಭುತ್ವಕ್ಕೇ ಗಂಡಾಂತರ.

* ಅಯ್ಯೋ ನನಗೇಕೆ ಬೇಕಿತ್ತು ಈ ಹೋರಾಟ ಎಂದು ಯಾವಾಗಲಾದರೂ ಅನಿಸಿದ್ದಿದೆಯೇ?
ಇಲ್ಲ, ಇಂತಹ ಸಾರ್ಥಕ ಕೆಲಸ ಮಾಡಲು ಅವಕಾಶ ಸಿಕ್ಕಿದ್ದೇ ನನ್ನ ಪುಣ್ಯ. ಇದಕ್ಕಿಂತ ಬೇರೆ ಏನು ಬೇಕು ಹೇಳಿ?

* ನಿಮ್ಮ ಈ ಹೋರಾಟಕ್ಕೆ ಕುಟುಂಬದ ಬೆಂಬಲ ಹೇಗಿದೆ?
ಕುಟುಂಬದ ಬೆಂಬಲ ಇಲ್ಲದಿದ್ದರೆ ಇಷ್ಟೆಲ್ಲ ಮಾಡಲು ಆಗುತ್ತಿರಲಿಲ್ಲ. 1979ರಲ್ಲಿ ನಾನು ಅಮೆರಿಕದಿಂದ ವಾಪಸಾದಾಗ ನನ್ನ ಪತ್ನಿ ಕೂಡ ಬಂದರು. ಮಕ್ಕಳು ಇಲ್ಲೇ ಶಿಕ್ಷಣ ಪಡೆದರು. ಜತೆಗಿದ್ದು ಹೋರಾಟಕ್ಕೆ ಬೆಂಬಲ ನೀಡಿದರು. ಈಗ ಅಮೆರಿಕದಲ್ಲಿ ಇದ್ದಾರೆ.

* ಮುಂದಿನ ನಿಮ್ಮ ಹೋರಾಟದ ಸ್ವರೂಪ ಹೇಗಿರುತ್ತದೆ?
ಈಗಿನ ಎಲ್ಲ ಸಮಸ್ಯೆಗಳಿಗೂ ಪರ್ಯಾಯ ರಾಜಕಾರಣವೇ ಮದ್ದು. ಅದನ್ನು ಜನಾಂದೋಲನ ಮಹಾಮೈತ್ರಿ ಮೂಲಕ ಮಾಡುತ್ತೇವೆ. ಸದ್ಯಕ್ಕೆ ಅದು ಸುಲಭ ಅಲ್ಲ ಎನ್ನುವುದೂ ಗೊತ್ತಿದೆ. ಆದರೆ,ಅದರ ಅವಶ್ಯಕತೆ ತುಂಬಾ ಇದೆ.

* ಯಾರಾದರೂ ನಿಮ್ಮನ್ನು ಬೆದರಿಸಿದ, ಆಮಿಷವೊಡ್ಡಿದ ಉದಾಹರಣೆಗಳು ಇವೆಯೇ?
ಯಾರೂ ಆ ಧೈರ್ಯ ತೋರಲಿಲ್ಲ. ಯಡಿಯೂರಪ್ಪನವರ ಬೆಂಬಲಿಗರು ನನ್ನ ಬಾಯಿ ಮುಚ್ಚಿಸಲು ಈ ಹಿಂದೆ ಪ್ರಯತ್ನಿಸಿದ್ದರು. ಅದು ಸಾಧ್ಯವಾಗದಿದ್ದ ಮೇಲೆ ಸುಮ್ಮನಾದರು. ರೆಡ್ಡಿ ಸಹೋದರರಿಂದಲೂ ತೊಂದರೆ ಆಗಿಲ್ಲ.

* ನಿಮಗೆ ದಾಖಲೆ ಕೊಡೋರು ಯಾರು?
ನಗುತ್ತಾ... ನಿಮಗೆ ಆಶ್ಚರ್ಯ ಆಗಬಹುದು, ಬಹುತೇಕ ಪ್ರಕರಣಗಳಲ್ಲಿ ಅಧಿಕಾರಿಗಳೇ ದಾಖಲೆಗಳನ್ನು ಕೊಟ್ಟಿದ್ದಾರೆ. ಹೋಟೆಲ್‌ ಮತ್ತಿತರ ಕಡೆ ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದೆ. ಸಾರ್ವಜನಿಕ ಹಿತಾಸಕ್ತಿ ಇರುವ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತಿದ್ದೆ.

* ನಿಮ್ಮಲ್ಲ ಹೋರಾಟಗಳಿಗೆ ಸ್ಫೂರ್ತಿ ಯಾರು?
ಕಡುಬಡತನದಲ್ಲಿ ಓದಿ, ಅಮೆರಿಕಕ್ಕೆ ಹೋಗುವಾಗ ನನ್ನ ತಾಯಿ ಒಂದು ಮಾತು ಹೇಳಿದ್ದರು. ಗಾಂಧೀಜಿ, ಸುಭಾಷ್‌ಚಂದ್ರ ಬೋಸ್‌, ಜಯಪ್ರಕಾಶ ನಾರಾಯಣ– ಇವರೆಲ್ಲ ವಿದೇಶಕ್ಕೆ ಹೋದರೂ ದೇಶಕ್ಕಾಗಿ ದುಡಿದರು. ಹಾಗೆಯೇ ನೀನು ಕೂಡ ದೇಶ ಸೇವೆಗೆ ಮರಳಬೇಕು ಎಂದಿದ್ದರು. ಶಿವರಾಮ ಕಾರಂತರು, ಮಾತಾಪಿತೃಗಳ ಋಣ ತೀರಿಸುವ ಹಾಗೆಯೇ ಸಮಾಜದ ಋಣ ಕೂಡ ತೀರಿಸಬೇಕು ಎಂದಿದ್ದರು. ಇವೇ ನನ್ನ ಸ್ಫೂರ್ತಿಯ ಸೆಲೆಗಳು.

ಜೆ.ಪಿ ಹೀಗೆ ಹೇಳಿದ್ದರು...
ಜಯಪ್ರಕಾಶ ನಾರಾಯಣ ಒಮ್ಮೆ ಅಮೆರಿಕಕ್ಕೆ ಬಂದಿದ್ದರು. ಆಗ ನಾನು ಕೂಡ ಅಲ್ಲಿದ್ದೆ. ಭೇಟಿ ಸಂದರ್ಭದಲ್ಲಿ ‘ನಿಮ್ಮ ಗುರಿಗಳೇನು’ ಎಂದು ಕೇಳಿದರು. ಆಗ ನಾನು ಅವರಿಗೆ, ಮತ್ತೆ ವಾಪಸ್‌ ಹಳ್ಳಿಗೆ ಹೋಗುವ ಇಚ್ಛೆ ಇದೆ ಎಂದು ಹೇಳಿದ್ದೆ. ಅದಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿ, ‘ಭಾರತಕ್ಕೆ ಬಂದಾಗ ಮೊದಲು ನನ್ನನ್ನು ಕಾಣಬೇಕು’ ಅಂದರು. ವಾಪಸ್ಸಾದಾಗ ದೆಹಲಿಯಲ್ಲಿ ಭೇಟಿ ಮಾಡಿ ಅವರಿಂದ ಸಲಹೆ ಪಡೆದಿದ್ದೆ. ಅವರ ಮಾರ್ಗದರ್ಶನ ನನ್ನನ್ನು ಇಲ್ಲಿವರೆಗೆ ತಂದು ನಿಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.