ADVERTISEMENT

ಫಲಿತಾಂಶ ಪ್ರಕಟಿಸದ ಕೆಪಿಎಸ್ಸಿ: ಸುರೇಶ್‌ ಕುಮಾರ್‌ ಪತ್ರ

​ಪ್ರಜಾವಾಣಿ ವಾರ್ತೆ
Published 26 ಮೇ 2022, 20:14 IST
Last Updated 26 ಮೇ 2022, 20:14 IST
ಸುರೇಶ್‌ ಕುಮಾರ್‌
ಸುರೇಶ್‌ ಕುಮಾರ್‌   

ಬೆಂಗಳೂರು: ಕೆಪಿಎಸ್‌ಸಿ ಕರ್ನಾಟಕ ನಾಗರಿಕ ಸೇವೆಯ 106 ಹುದ್ದೆಗಳಿಗೆ ಮುಖ್ಯ ಪರೀಕ್ಷೆ ನಡೆಸಿ 15 ತಿಂಗಳು ಕಳೆದಿದ್ದರೂ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ. ಇದರಿಂದ ಅಭ್ಯರ್ಥಿಗಳು ಹತಾಶೆಗೊಳಗಾಗಿ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳಬಹುದು ಎಂದು ಶಾಸಕ ಎಸ್‌.ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ಅವರು, ‘ಈ ವಿಚಾರವಾಗಿ ಮಾರ್ಚ್‌ 24 ರಂದು ಪತ್ರ ಬರೆದಿದ್ದೆ. ಅಲ್ಲದೆ,ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರನ್ನೂ ಭೇಟಿ ಮಾಡಿ ವಾಸ್ತವಾಂಶಗಳನ್ನು ವಿವರಿಸಿದ್ದೇನೆ. ಆದರೆ ನಿಖರವಾದ ಮಾಹಿತಿ ನನಗಾಗಲೀ, ಅಭ್ಯರ್ಥಿಗಳಾಗಲಿ ಲಭ್ಯವಾಗಿಲ್ಲ’ ಎಂದುತಿಳಿಸಿದ್ದಾರೆ.

ಕೆಪಿಎಸ್‌ಸಿಯಿಂದ 10 ವರ್ಷಗಳಲ್ಲಿ ನಡೆದಿರುವ ಪರೀಕ್ಷೆ ನಾಲ್ಕು ಬಾರಿ ಮಾತ್ರ. 106 ಹುದ್ದೆಗಳಿಗೆ 2017 ನೇ ಸಾಲಿನ ಅಧಿಸೂಚನೆ 2020 ರ ಫೆಬ್ರುವರಿಯಲ್ಲಿ ಪ್ರಕಟವಾಯಿತು. 1.67 ಲಕ್ಷ ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆ ತೆಗೆದುಕೊಂಡಿದ್ದರು. ಇವರಲ್ಲಿ 2,200 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹರಾಗಿದ್ದರು. ಈ ಅಭ್ಯರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆ ನಡೆದದ್ದು 2020 ರ ಆಗಸ್ಟ್‌ 24 ರಂದು. 2021 ರ ಫೆಬ್ರುವರಿಯಲ್ಲಿಮುಖ್ಯಪರೀಕ್ಷೆ ನಡೆದಿತ್ತು. ಈವರೆಗೂ ಫಲಿತಾಂಶ ಪ್ರಕಟವಾಗಿಲ್ಲ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.