ADVERTISEMENT

₹53 ಲಕ್ಷ ವಾಪಸ್‌ ಕೋರಿ ಸಚಿನ್‌ ಸಲ್ಲಿಸಿದ್ದ ಅರ್ಜಿ ವಜಾ

ಸಿಬಿಐ ವಶಕ್ಕೆ ಪಡೆದಿದ್ದ ನಗದು ಬಿಡುಗಡೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 21:10 IST
Last Updated 24 ನವೆಂಬರ್ 2020, 21:10 IST
.
.   

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧದ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನ ಕಂಪನಿಯ ಕಚೇರಿಯಿಂದ ಸಿಬಿಐ ವಶಕ್ಕೆ ಪಡೆದಿದ್ದ ₹ 53.46 ಲಕ್ಷ ನಗದನ್ನು ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಿ ಶಿವಕುಮಾರ್‌ ಆಪ್ತ ಸಚಿನ್‌ ನಾರಾಯಣ್‌ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ಶಿವಕುಮಾರ್‌ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಿಕೊಂಡಿದ್ದ ಸಿಬಿಐ ಅಧಿಕಾರಿಗಳು, ಅಕ್ಟೋಬರ್‌ 5ರಂದು ಬೆಂಗಳೂರು, ಹಾಸನ, ದೆಹಲಿ ಮತ್ತು ಮುಂಬೈನ ವಿವಿಧೆಡೆ ಶೋಧ ನಡೆಸಿದ್ದರು. ಕೆಪಿಸಿಸಿ ಅಧ್ಯಕ್ಷರ ಆಪ್ತ ಉದ್ಯಮಿಯಾಗಿರುವ ಸಚಿನ್‌ ನಾರಾಯಣ್‌ ಅವರ ಹಾಸನದ ಮನೆ ಮತ್ತು ಕಚೇರಿಗಳ ಮೇಲೂ ಸಿಬಿಐ ದಾಳಿ ನಡೆದಿತ್ತು.

ಸಚಿನ್‌ ನಾರಾಯಣ್‌ ಅವರ ವೆಲ್‌ವರ್ತ್‌ ಸಾಫ್ಟ್‌ವೇರ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಕಚೇರಿಯಲ್ಲಿ ₹ 53.46 ಲಕ್ಷ ನಗದು ವಶಪಡಿಸಿಕೊಳ್ಳಲಾಗಿತ್ತು. ಕಂಪನಿಯ ಕಚೇರಿಯಲ್ಲಿ ಪೆಟ್ಟಿಗೆಯೊಂದರಲ್ಲಿ ಇಡಲಾಗಿದ್ದ ₹ 47.98 ಲಕ್ಷ ಮತ್ತು ಸಚಿನ್‌ ನಾರಾಯಣ್‌ ಅವರ ಕೊಠಡಿಯ ಅಲ್ಮೆರಾದಲ್ಲಿ ಇದ್ದ ₹ 5.48 ಲಕ್ಷ ನಗದನ್ನು ತನಿಖಾ ತಂಡ ವಶಕ್ಕೆ ಪಡೆದಿತ್ತು.

ADVERTISEMENT

ತಮ್ಮ ಕಂಪನಿ ವಿವಿಧ ಟೆಲಿವಿಷನ್‌ ಚಾನೆಲ್‌ಗಳಿಂದ ಕೇಬಲ್‌ ನೆಟ್‌ವರ್ಕ್‌ಗಳಿಗೆ ಸಂಪರ್ಕ ಒದಗಿಸುವ ಕೆಲಸ ಮಾಡುತ್ತಿದೆ. ಇದಕ್ಕಾಗಿ ಕೇಬಲ್‌ ಆಪರೇಟರ್‌ಗಳು ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳ ಬಾಬ್ತು ಪಾವತಿಸಿದ್ದ ಹಣವನ್ನು ಕಚೇರಿಯಲ್ಲಿ ಇಡಲಾಗಿತ್ತು. ಅದನ್ನು ಸಿಬಿಐ ವಶಕ್ಕೆ ಪಡೆದಿದೆ ಎಂದು ಸಚಿನ್‌ ನಾರಾಯಣ್‌ ಅರ್ಜಿಯಲ್ಲಿ ದೂರಿದ್ದರು. ಸದರಿ ಮೊತ್ತವನ್ನು ಮರಳಿಸುವಂತೆ ಸಿಬಿಐಗೆ ನಿರ್ದೇಶನ ನೀಡುವಂತೆ ವೈಯಕ್ತಿಕವಾಗಿ ಮತ್ತು ಕಂಪನಿಯಿಂದ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.

ಅರ್ಜಿಯನ್ನು ವಿರೋಧಿಸಿದ್ದ ಸಿಬಿಐ ಪರ ವಕೀಲರು, ‘ಅರ್ಜಿದಾರರ ಸಮ್ಮುಖದಲ್ಲೇ ನಗದನ್ನು ವಶಕ್ಕೆ ಪಡೆಯಲಾಗಿತ್ತು. ಆ ಸಮಯದಲ್ಲಿ ಯಾವುದೇ ತಕರಾರು ಎತ್ತಿರಲಿಲ್ಲ. ಹಣದ ಮೂಲ ಕುರಿತು ಸರಿಯಾದ ದಾಖಲೆ ಒದಗಿಸುವಲ್ಲಿ ಅವರು ವಿಫಲರಾಗಿದ್ದರು. ಡಿ.ಕೆ. ಶಿವಕುಮಾರ್‌ ಅವರ ಪತ್ನಿಯ ಕಂಪನಿ ಮತ್ತು ಸಚಿನ್‌ ನಾರಾಯಣ್‌ ಕಂಪನಿಗಳ ನಡುವೆ ದೊಡ್ಡ ಮೊತ್ತದ ವಹಿವಾಟು ನಡೆದಿರುವುದಕ್ಕೆ ದಾಖಲೆಗಳು ಲಭಿಸಿವೆ. ಹಿಂದೆ ದೆಹಲಿಯ ಸಚಿನ್‌ ನಾರಾಯಣ್‌ ನಿವಾಸದಲ್ಲಿ ಶಿವಕುಮಾರ್‌ ಅವರಿಗೆ ಸೇರಿದ್ದ ಭಾರಿ ಮೊತ್ತದ ಹಣವನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು’ ಎಂದು ವಾದಿಸಿದ್ದರು.

ಸಚಿನ್‌ ನಾರಾಯಣ್‌ ಮತ್ತು ವೆಲ್‌ವರ್ತ್‌ ಸಾಫ್ಟ್‌ವೇರ್‌ ಕಂಪನಿಗಳು ಸಲ್ಲಿಸಿದ್ದ ಎರಡೂ ಅರ್ಜಿಗಳನ್ನು ವಜಾಗೊಳಿಸಿ ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಟಿ.ಎನ್‌. ಇನವಳ್ಳಿ ನವೆಂಬರ್‌ 20ರಂದು ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.