ADVERTISEMENT

ಡಿಕೆಶಿ ಆಪ್ತರ ಹಣ ಹಿಂದಿರುಗಿಸಲು ಸಿಬಿಐಗೆ ಹೈಕೋರ್ಟ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 15:47 IST
Last Updated 11 ಮಾರ್ಚ್ 2021, 15:47 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತ ಸಚಿನ್ ನಾರಾಯಣ ಅವರ ₹5.48 ಲಕ್ಷ ಮತ್ತು ಅವರಿಗೇ ಸೇರಿದ ವೆಲ್‌ವರ್ತ್‌ ಸಾಫ್ಟ್‌ವೇರ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ₹47.98 ಲಕ್ಷ ಹಿಂದಿರುಗಿಸಲು ಹೈಕೋರ್ಟ್ ನಿರ್ದೇಶನ ನೀಡಿದೆ.

ಶಿವಕುಮಾರ್ ಮತ್ತು ಅವರ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾಗ ಸಿಬಿಐ ಈ ಹಣ ವಶಪಡಿಸಿಕೊಂಡಿತ್ತು. ಅದನ್ನು ಹಿಂದಿರುಗಿಸಲು ಆದೇಶಿಸುವಂತೆ ಕೋರಿ ಸಚಿನ್‌ ನಾರಾಯಣ್‌ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಚುನಾಯಿತ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2020ರ ಅಕ್ಟೋಬರ್‌ನಲ್ಲಿ ತಿರಸ್ಕರಿಸಿತ್ತು.

ತಮ್ಮ ಕಂಪನಿ ವಿವಿಧ ಟೆಲಿವಿಷನ್‌ ಚಾನೆಲ್‌ಗಳಿಂದ ಕೇಬಲ್‌ ನೆಟ್‌ವರ್ಕ್‌ಗಳಿಗೆ ಸಂಪರ್ಕ ಒದಗಿಸುವ ಕೆಲಸ ಮಾಡುತ್ತಿದೆ. ಇದಕ್ಕಾಗಿ ಕೇಬಲ್‌ ಆಪರೇಟರ್‌ಗಳು ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳ ಬಾಬ್ತು ಪಾವತಿಸಿದ್ದ ಹಣವನ್ನು ಕಚೇರಿಯಲ್ಲಿ ಇಡಲಾಗಿತ್ತು. ಬ್ಯಾಂಕ್‌ಗೆ ಜಮೆ ಮಾಡುವ ಮೊದಲು ಅದನ್ನು ಸಿಬಿಐ ವಶಕ್ಕೆ ಪಡೆದಿತ್ತು ಎಂದು ಸಚಿನ್‌ ನಾರಾಯಣ್‌ ಅರ್ಜಿಯಲ್ಲಿ ದೂರಿದ್ದರು. ಈ ಮೊತ್ತ ಮರಳಿಸುವಂತೆ ಸಿಬಿಐಗೆ ನಿರ್ದೇಶನ ನೀಡುವಂತೆ ವೈಯಕ್ತಿಕವಾಗಿ ಮತ್ತು ಕಂಪನಿಯಿಂದ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.

ADVERTISEMENT

‘ಡಿ.ಕೆ.ಶಿವಕುಮಾರ್ ಅವರ ಪತ್ನಿ ನಡೆಸುತ್ತಿರುವ ವ್ಯವಹಾರದಲ್ಲಿ ಸಚಿನ್ ನಾರಾಯಣ್ ಪಾಲುದಾರರಾಗಿದ್ದಾರೆ. ಸ್ಥಳೀಯ ಕೇಬಲ್ ಆಪರೇಟರ್‌ಗಳು ಸಂಗ್ರಹಿಸಿದ ಮೊತ್ತವನ್ನು ನೇರವಾಗಿ ಅರ್ಜಿದಾರರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದರಿಂದ ಅರ್ಜಿದಾರರ ವಿವರಣೆ ನಂಬಲು ಸಾಧ್ಯವಿಲ್ಲ’ ಎಂದು ಸಿಬಿಐ ವಿಶೇಷ ಅಭಿಯೋಜಕರು ವಾದಿಸಿದರು.

ಡಿ.ಕೆ.ಶಿವಕುಮಾರ್ ಅಥವಾ ಅವರ ಪತ್ನಿ ವಿರುದ್ಧ ದಾಖಲಾಗಿರುವ ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣಕ್ಕೂ ಸಚಿನ್‌ಗೂ ಸಂಬಂಧ ಇದೆ ಎಂಬುದಕ್ಕೆ ಪ್ರಾಥಮಿಕ ಪುರಾವೆಗಳು ಕಾಣಿಸುತ್ತಿಲ್ಲ ಎಂದು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.