ADVERTISEMENT

ನಕಲಿ ಸಿಡಿ ಬಿಡುಗಡೆಯಲ್ಲಿ ಎಚ್‌ಡಿಕೆ ನಿಸ್ಸೀಮ: ಸದಾನಂದಗೌಡ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 12:18 IST
Last Updated 10 ಜನವರಿ 2020, 12:18 IST
   

ಮಂಡ್ಯ: ‘ನಕಲಿ ಸಿಡಿ ಬಿಡುಗಡೆ ಮಾಡುವುದರಲ್ಲಿ ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ನಿಸ್ಸೀಮ. ಕುಸಿಯುತ್ತಿರುವ ತಮ್ಮ ರಾಜಕೀಯ ಮೆಟ್ಟಿಲುಗಳನ್ನು ಭದ್ರಪಡಿಸಿಕೊಳ್ಳಲು ಅವರು ಸಿಡಿ ಬಿಡುಗಡೆ ಮಾಡಿದ್ದಾರೆ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಶುಕ್ರವಾರ ವ್ಯಂಗ್ಯವಾಡಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಈ ಸಿಡಿಗಳು ಹಲವರಿಗೆ ರಾಜಕೀಯ ಅಸ್ತಿತ್ವದ ಸ್ವತ್ತಗಳಾಗಿ ಪರಿವರ್ತನೆಯಾಗಿವೆ. ನಮ್ಮ ರಾಜ್ಯದಲ್ಲಿ ಬಿಡುಗಡೆ ಆಗಿರುವ ಸಿಡಿಗಳ ಸಂಖ್ಯೆ ನೋಡಿದರೆ ಇಷ್ಟುಹೊತ್ತಿಗೆ ಹಲವರು ಜೈಲಿಗೆ ಹೋಗಬೇಕಾಗಿತ್ತು. ಮಂಗಳೂರು ಘಟನೆ ನಡೆದು ಹಲವು ದಿನಗಳಾಗಿವೆ, ಸಿಡಿ ತಯಾರಿಸಲು ಇಷ್ಟು ದಿನ ಬೇಕಾಗಿತ್ತಾ, ಘಟನೆ ನಡೆದ ತಕ್ಷಣವೇ ಸಿಡಿ ಬಿಡುಗಡೆ ಮಾಡಬಹುದಿತ್ತಲ್ಲಾ’ ಎಂದು ಪ್ರಶ್ನಿಸಿದರು.

‘ನಕಲಿ ಸಿಡಿಗಳನ್ನು ಯಾರೂ ನಂಬುವುದಿಲ್ಲ. ತಾತ್ಕಾಲಿಕವಾಗಿ ತಮ್ಮ ಬೇಳೆ ಬೇಯಿಸಿಕೊಳ್ಳಲು, ಜನರನ್ನು ತಪ್ಪು ದಾರಿಗೆ ಎಳೆಯುವ ಉದ್ದೇಶದಿಂದ ಬಿಡುಗಡೆ ಮಾಡಿದ್ದಾರೆ. ಅವರದ್ದೇ ಜನ ಕಳುಹಿಸಿ, ಅವರ ಜನಕ್ಕೇ ಪೊಲೀಸ್‌ ವೇಷ ಹಾಕಿಸಿ ನಕಲಿ ಸಿಡಿ ಮಾಡಿರಬಹುದು. ಇದರ ಹಿಂದೆ ದೊಡ್ಡ ಹುನ್ನಾರವಿದೆ’ ಎಂದು ಆರೋಪಿಸಿದರು.

ADVERTISEMENT

ಸಿದ್ದರಾಮಯ್ಯಗೆ ಮಾನಸಿಕ ಖಿನ್ನತೆ

‘ಗೂಟದ ಕಾರು ಬಿಟ್ಟು ಸ್ವಂತ ಕಾರಿಗೆ ಬಂದ ನಂತರ ಸಿದ್ದರಾಮಯ್ಯ ಅವರಿಗೆ ಮಾನಸಿಕ ಖಿನ್ನತೆ ಉಂಟಾಗಿದೆ. ಮಾನಸಿಕ ಸಮಸ್ಯೆಯಿಂದ ಅವರು, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಹೇಳಿದ್ದಾರೆ. ಆದರೆ ಅರ್ಥಿಕ ದಿವಾಳಿ ಒಂದೇ ಬಾರಿ ಬರುವುದಿಲ್ಲ. ಅದಕ್ಕೆ ಹಿಂದಿನ ಸರ್ಕಾರವೂ ಕಾರಣವಾಗಿದೆ’ ಎಂದು ಆರೋಪಿಸಿದರು.

‘ನೆರೆ ಸಮಸ್ಯೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಬಹಿರಂಗವಾಗಿ ಪರಿಹಾರ ಕೇಳಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಶಹಬ್ಬಾಶ್‌ಗಿರಿ ಕೊಡಲೇಬೇಕು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.