ADVERTISEMENT

ಸತ್ಯವನ್ನು ಯಾರಿಂದಲೂ ಮುಚ್ಚಿಡಲಾಗದು: ಸದಾನಂದ ಗೌಡ

ರೋಷನ್ ಬೇಗ್ ಹೇಳಿಕೆಗೆ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 21 ಮೇ 2019, 18:30 IST
Last Updated 21 ಮೇ 2019, 18:30 IST
   

ನವದೆಹಲಿ: ‘ಸತ್ಯವನ್ನು ಯಾರಿಂದಲೂ ಮುಚ್ಚಿಡಲಾಗದು. ಸತ್ಯ ಒಂದಿಲ್ಲೊಂದು ದಿನ ಹೊರಬೀಳಲೇಬೇಕು. ರೋಷನ್‌ ಬೇಗ್‌ ಇಷ್ಟು ದಿನ ಮುಚ್ಚಿಟ್ಟಿದ್ದ ಸತ್ಯವನ್ನು ಹೊರ ಹಾಕಿರುವುದು ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಕನ್ನು ಸೂಚಿಸಬಹುದು’ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅಭಿಪ್ರಾಯಪಟ್ಟರು.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಅವರ ಮನಸ್ಸಿನ ಭಾವನೆಗಳಿಗೆ ಪ್ರತಿರೋಧ ಒಡ್ಡಲು ಬಹುತೇಕ ಕಾಂಗ್ರೆಸ್‌ ಮುಖಂಡರು ಹೆದರುತ್ತಿದ್ದರು. ಇದೀಗ ಬೇಗ್‌ ಅವರು ಸತ್ಯ ಸಂಗತಿಗಳನ್ನು ಹೊರಹಾಕಿದ್ದಾರೆ’ ಎಂದರು.

ADVERTISEMENT

‘ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿರುವ ಜಮೀರ್‌ ಅಹಮದ್‌ ಅವರು ಬೆಂಗಳೂರಿನಲ್ಲಿ ನನ್ನ ಸ್ಥಾನ ಆಕ್ರಮಿಸಿದ್ದು, ಅದಕ್ಕೆ ಪರೋಕ್ಷವಾಗಿ ಸಿದ್ದರಾಮಯ್ಯ ಕಾರಣ ಎಂದೇ ಭಾವಿಸಿರುವ ರೋಷನ್‌ ಬೇಗ್‌, ಅನಿವಾರ್ಯವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ್ದಾರೆ’ ಎಂದು ಹೇಳಿದರು.

‘ಕಾಂಗ್ರೆಸ್‌ ಪಕ್ಷವು ಅಲ್ಪಸಂಖ್ಯಾತರನ್ನು ಸ್ವಾರ್ಥಕ್ಕೆ ಬಳಸಿಕೊಂಡು ಕಡೆಗಣಿಸಿದೆ ಎಂಬ ಸಂಗತಿಯೂ ಬೇಗ್‌ ಅವರಿಗೆ ತಡವಾಗಿ ಅರಿವಿಗೆ ಬಂದಿದೆ. ಬಹುಶಃ ಮೊದಲೇ ಅರಿವಿಗೆ ಬಂದಿದ್ದರೂ, ಹೇಳಲಾಗದೇ ಚಡಪಡಿಸುತ್ತಿದ್ದರು ಅನ್ನಿಸುತ್ತಿದೆ’ ಎಂದ ಸದಾನಂದಗೌಡ, ‘ಬಿಜೆಪಿಯ ತತ್ವ, ಸಿದ್ಧಾಂತ ಒಪ್ಪಿ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.