ADVERTISEMENT

‘ಕರ್ಮಚಾರಿಗಳ ಅಭಿವೃದ್ಧಿಗೆ ಮೀಸಲಿಟ್ಟ ₹ 120 ಕೋಟಿ ಸಾಲ ಮನ್ನಾಗೆ ಬಳಕೆ’

ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗ ಸದಸ್ಯ ಜಗದೀಶ್ ಹಿರೇಮನಿ ಆರೋಪ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2019, 19:44 IST
Last Updated 26 ಫೆಬ್ರುವರಿ 2019, 19:44 IST

ಬೆಂಗಳೂರು: ‘ಸಫಾಯಿ ಕರ್ಮಚಾರಿಗಳ (ಪೌರ ಕಾರ್ಮಿಕರ) ಅಭಿವೃದ್ಧಿ ನಿಗಮದಲ್ಲಿರುವ ₹ 120 ಕೋಟಿಯನ್ನು ರಾಜ್ಯ
ಸರ್ಕಾರ ಈ ಸಮುದಾಯಕ್ಕೆ ಬಳಸದೆ ರೈತರ ಸಾಲಮನ್ನಾ ಯೋಜನೆಗೆ ಉಪಯೋಗಿಸಿದೆ’ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗ ಸದಸ್ಯ ಜಗದೀಶ್ ಹಿರೇಮನಿ ದೂರಿದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎನ್‌ಎಫ್‌ಕೆಡಿಸಿ ಎರಡು ವರ್ಷದ ಹಿಂದೆ ಕರ್ಮಚಾರಿಗಳ ಅಭಿವೃದ್ಧಿಗೆ ನೀಡಿದ ₹ 70 ಕೋಟಿ ಈ ನಿಗಮದಲ್ಲಿದೆ. ಕೇಂದ್ರ ನೀಡಿದ ಈ ಹಣ ಬಳಕೆಯಾಗಿಲ್ಲ. ರಾಜ್ಯ ಸರ್ಕಾರ ಹಣ ವೆಚ್ಚ ಮಾಡಲು ಆಸಕ್ತಿ ವಹಿಸಿಲ್ಲ’ ಎಂದು ಆರೋಪಿಸಿದರು.

‘ಸಫಾಯಿ ಕರ್ಮಚಾರಿಗಳಿಗೆ ಸ್ವಯಂ ಉದ್ಯೋಗ ಕಂಡುಕೊಳ್ಳಲು ಎನ್‌ಎಫ್‌ಕೆಡಿಸಿಯಿಂದ ₹ 25 ಲಕ್ಷದವರೆಗೆ ಸಾಲ ನೆರವು ನೀಡಲಾಗುತ್ತದೆ. ಆದರೆ, ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಈ ವರ್ಗಕ್ಕೆ ನೆರವು ಸಿಗುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಒಳಚರಂಡಿ ಸ್ವಚ್ಚತಾ ಕಾರ್ಯ ಮಾಡುವ ಸಫಾಯಿ ಕರ್ಮಚಾರಿಗಳಿಗೆ ಯಂತ್ರೋಪಕರಣ ನೀಡಬೇಕು. ಯಂತ್ರೋಪಕರಣ ಬಳಸದೆ ಇರುವುದರಿಂದ ಸಾವಿನ ಪ್ರಮಾಣ ಹೆಚ್ಚುತ್ತಿದೆ. ರೋಬೊ ಮೆಷಿನ್‌ ನೆರವಿನಿಂದ ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಇಂಥ ಮೆಷಿನ್‌ ಇಲ್ಲ’ ಎಂದರು.

‘ಗೃಹ ಭಾಗ್ಯ ಯೋಜನೆಗೆ ರಾಜ್ಯದ 4,112 ಪೌರ ಕಾರ್ಮಿಕರು ಅರ್ಹರಾಗಿದ್ದಾರೆ. ಆದರೆ, 1,408 ಮನೆಗಳನ್ನು ಮಾತ್ರ ಈವರೆಗೆ ನಿರ್ಮಿಸಲಾಗಿದೆ. 2019ರ ಒಳಗೆ ಉಳಿದ ಎಲ್ಲರಿಗೂ ಮನೆ ನಿರ್ಮಿಸಿಕೊಡುವುದಾಗಿ ಪೌರಾಡಳಿತ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 32 ಸಾವಿರ ಪೌರಕಾರ್ಮಿಕರಿಗೂ 2022ರೊಳಗೆ ಮನೆ ನಿರ್ಮಿಸಿಕೊಡಲು ಆದೇಶ ಆಗಿದೆ’ ಎಂದು ಅವರು ವಿವರಿಸಿದರು.

‘ಸರ್ಕಾರದಿಂದ ಸಫಾಯಿ ಕರ್ಮಚಾರಿಗಳಿಗೆ ದೊರೆಯಬೇಕಾದ ಎಲ್ಲ ಸೌಲಭ್ಯಗಳು ಸಿಗುತ್ತಿಲ್ಲ. ವಸತಿ ಸೌಲಭ್ಯ ಸೇರಿದಂತೆ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಬೇಕು. ನಿವೇಶನಗಳನ್ನು ನೀಡಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು’ ಎಂದೂ ಅವರು ಆಗ್ರಹಿಸಿದರು.

1,720 ಮ್ಯಾನುವಲ್‌ ಸ್ಕ್ಯಾವೆಂಜರ್‌ಗಳು!

ರಾಜ್ಯದಲ್ಲಿ 2018ಕ್ಕೂ ಮೊದಲು 779 ಮ್ಯಾನುವಲ್‌ ಸ್ಕ್ಯಾವೆಂಜರ್‌ಗಳಿದ್ದರು. ಕೇಂದ್ರ ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆ 2018ರಲ್ಲಿ ರಾಜ್ಯದ ಆಯ್ದ ಆರು ಕಡೆಗಳಲ್ಲಿ (ಕೋಲಾರ, ಬೆಂಗಳೂರು, ಮೈಸೂರು, ಕಲಬುರ್ಗಿ, ಹುಬ್ಬಳ್ಳಿ, ಧಾರವಾಡ) ಮಾತ್ರ ನಡೆಸಿದ ಸಮೀಕ್ಷೆಯಲ್ಲಿ ಈ ಸಂಖ್ಯೆ 1,720 ಎಂದು ಗುರುತಿಸಲಾಗಿದೆ ಎಂದು ಜಗದೀಶ್ ಹಿರೇಮನಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.