ADVERTISEMENT

ಕಸಾಪ ಬೈ–ಲಾ ತಿದ್ದುಪಡಿ: ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ!

ವಿಶ್ವಸ್ಥ ಸಂಸ್ಥೆ ರಚನೆ: ಜಿಲ್ಲಾಧ್ಯಕ್ಷರ ಅಧಿಕಾರ ಮೊಟಕು– ಆರೋಪ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 19:31 IST
Last Updated 28 ಏಪ್ರಿಲ್ 2022, 19:31 IST
ಮಹೇಶ್‌ ಜೋಶಿ
ಮಹೇಶ್‌ ಜೋಶಿ   

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ(ಕಸಾಪ) ಬೈ–ಲಾಕ್ಕೆ ತಂದಿರುವ ಕೆಲ ತಿದ್ದುಪಡಿಗಳು ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಕಾರ್ಯಕಾರಿ ಸಮಿತಿ ಮತ್ತು ಜಿಲ್ಲಾ ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸುವ ಪ್ರಯತ್ನ ಇದಾಗಿದೆ ಎನ್ನುವ ಅಸಮಾಧಾನ ವ್ಯಕ್ತವಾಗಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿ ಮೇ 1ರಂದು ಪರಿಷತ್ತಿನ ಕಾರ್ಯಕಾರಿ ಸಮಿತಿ ಮತ್ತು ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬೈ–ಲಾ ತಿದ್ದುಪಡಿಗೆ ಅನುಮೋದನೆ ಪಡೆಯಲು ಕಸಾಪ ಕೇಂದ್ರ ಘಟಕ ಮುಂದಾಗಿರುವುದು ಚರ್ಚೆಯನ್ನು ಹುಟ್ಟುಹಾಕಿದೆ.

ಮಹತ್ವದ ವಿಷಯಗಳಿಗೆ ತಿದ್ದುಪಡಿ ಮಾಡುವ ಮೂಲಕ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಲಾಗುತ್ತಿದೆ. ಈ ಮೂಲಕ ಅಧಿಕಾರ ಕೇಂದ್ರೀಕರಣಗೊಳಿಸುವ ಪ್ರಯತ್ನ ನಡೆದಿದೆ ಎಂದು ಸದಸ್ಯರು ದೂರಿದ್ದಾರೆ..

ADVERTISEMENT

ಪರಿಷತ್ತಿನ ಧ್ಯೇಯೋದ್ದೇಶಗಳ ಈಡೇರಿಕೆಗಾಗಿ ವಿಶ್ವಸ್ಥ ಸಂಸ್ಥೆ (ಟ್ರಸ್ಟ್‌) ರಚಿಸಲು ಪ್ರಸ್ತಾಪಿಸಲಾಗಿದೆ.

‘ಪರಿಷತ್ತಿನ ಅಧೀನದಲ್ಲೊಂದು ವಿಶ್ವಸ್ಥ ಸಂಸ್ಥೆ ಅಗತ್ಯವೇ? ಪರಿಷತ್ತಿನೊಳಗೊಂದು ಸ್ವತಂತ್ರ ಸಂಸ್ಥೆಯನ್ನು ಹುಟ್ಟುಹಾಕಿದಂತಾಗುತ್ತದೆ. ಪರಿಷತ್ತಿನ ಕಾರ್ಯಕಾರಿ ಸಮಿತಿಯೇ ನಿಭಾಯಿಸಬಹುದಾದ ವಿಚಾರಕ್ಕೆ ಮತ್ತೊಂದು ಸಂಸ್ಥೆ ಹುಟ್ಟುಹಾಕುವುದು ಎಷ್ಟು ಸರಿ? ಈ ಸಂಸ್ಥೆಯ ವಿವರಗಳು ಸಹ ಗೊತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಜಿಲ್ಲಾಧ್ಯಕ್ಷರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಜಿಲ್ಲೆ, ತಾಲ್ಲೂಕು ಅಥವಾ ಕ್ಷೇತ್ರ, ಹೋಬಳಿ ಮತ್ತು ಗಡಿ ಘಟಕಗಳ ಕಾರ್ಯಕಾರಿ ಸಮಿತಿಗೆ ಚುನಾಯಿತ ಮತ್ತು ನಾಮನಿರ್ದೇಶನಗೊಳ್ಳುವ ಸದಸ್ಯರ ವಿವರಗಳನ್ನು ಕೇಂದ್ರ ಪರಿಷತ್ತಿನ ಅಧ್ಯಕ್ಷರಿಗೆ ಅನುಮೋದನೆಗಾಗಿ ಕಳುಹಿಸಬೇಕು. ಕೇಂದ್ರ ಪರಿಷತ್ತಿನ ಅಧ್ಯಕ್ಷರು ಪರಿಶೀಲಿಸಿ ಮನವರಿಕೆಯಾದಲ್ಲಿ ಮಾತ್ರ ಅನುಮತಿ ನೀಡತಕ್ಕದ್ದು’ ಎಂದು ಉಲ್ಲೇಖಿಸಲಾಗಿದೆ.

‘ಇಂತಹ ಪ್ರಯತ್ನದ ಮೂಲಕ ಅಧಿಕಾರ ಕೇಂದ್ರೀಕರಣ ಮಾಡಲಾಗುತ್ತಿದೆ. ಹೋಬಳಿ ಘಟಕಗಳ ನೇಮಕದ ವಿಷಯದಲ್ಲೂ ಜಿಲ್ಲಾಧ್ಯಕ್ಷರಿಗೆ ಸ್ವಾತಂತ್ರ್ಯ ಇಲ್ಲ’ ಎಂದು ಅಸಮಾಧಾನ ವ್ಯಕ್ತವಾಗಿದೆ.

ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಪರಿಷತ್ತಿನ ಕಟ್ಟಡ ನಿರ್ಮಾಣಕ್ಕೆ ಸರ್ಕಾರ, ಸಂಘ–ಸಂಸ್ಥೆಗಳಿಂದ ಪಡೆದ ನಿವೇಶನವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರಿನಲ್ಲಿ ನೋಂದಾಯಿಸಬೇಕು. ಈ ಘಟಕಗಳಿಗೆ ಏಕರೂಪ ವಿನ್ಯಾಸ ನೀಲನಕ್ಷೆ ತಯಾರಿಸಬೇಕು. ಕಟ್ಟಡ ನಿರ್ಮಾಣಕ್ಕೆ ಸರ್ಕಾರ, ಸಂಘ–ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳಿಂದ ಸಂಗ್ರಹಿಸಲಾದ ದೇಣಿಗೆಯನ್ನು ಕೇಂದ್ರ ಪರಿಷತ್ತಿಗೆ ಕಳುಹಿಸಬೇಕು. ಕೇಂದ್ರ ಪರಿಷತ್ತು ಮತ್ತು ಜಿಲ್ಲಾ ಘಟಕ ಸಂಗ್ರಹಿಸಿದ ಒಟ್ಟಾರೆ ಮೊತ್ತವನ್ನು ಆಯಾ ಘಟಕದ ಕಟ್ಟಡ ನಿರ್ಮಾಣಕ್ಕೆ ಒದಗಿಸಲಾಗುವುದು ಎಂದು ಪ್ರಸ್ತಾಪಿಸಲಾಗಿದೆ.

ಚರ್ಚಿಸಿಯೇ ತಿದ್ದುಪಡಿ ಪ್ರಸ್ತಾವ– ಜೋಶಿ

‘ಬೈ–ಲಾ ತಿದ್ದುಪಡಿಯ ಅಂಶಗಳಿಗೆ ಕಾರ್ಯಕಾರಿ ಸಮಿತಿ ಮತ್ತು ಕನ್ನಡಕ್ಕಾಗಿ ಶ್ರಮಿಸುತ್ತಿರುವ ಹಿರಿಯರು ಇದ್ದ ಚಿಂತನಾ ಸಭೆಯ ಒಪ್ಪಿಗೆ ಪಡೆಯಲಾಗಿದೆ. ಈ ಸಭೆಗಳಲ್ಲಿ ವಿರೋಧ ವ್ಯಕ್ತವಾಗಿಲ್ಲ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್‌ ಜೋಶಿ ಪ್ರತಿಪಾದಿಸಿದರು.

‘ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಸ್ವರೂಪವನ್ನು ಬದಲಾಯಿಸಿಲ್ಲ. ಜತೆಗೆ, ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲೂ ತಿದ್ದುಪಡಿಗಳ ಬಗ್ಗೆ ಸಲಹೆ ನೀಡಬಹುದು. ಹೀಗಾಗಿ, ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಧುನಿಕ ಜಗತ್ತಿಗೆ ತಕ್ಕಂತೆ ಬದಲಾವಣೆಗಳನ್ನು ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಬೈಲಾ ಪ್ರಕಾರವೇ ವಿಶ್ವಸ್ಥ ಸಂಸ್ಥೆ ರಚಿಸಲು ಉದ್ದೇಶಿಸಲಾಗಿದೆ. ಈ ಸಂಸ್ಥೆಯು ಪರಿಷತ್ತಿನ ಅವಿಭಾಜ್ಯ ಅಂಗವಾಗಿರುತ್ತದೆ’ ಎಂದರು.

ತಿದ್ದುಪಡಿಯ ಪ್ರಮುಖ ಅಂಶಗಳು:

* ಪರಿಷತ್ತಿನ ಸದಸ್ಯತ್ವಕ್ಕೆ ಕನಿಷ್ಠ ಪ್ರಾಥಮಿಕ ಶಿಕ್ಷಣ ಪಡೆದಿರಬೇಕು ಅಥವಾ ಪರಿಷತ್ತು ನಡೆಸುವ ಸರಳ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಿವಿಧ ಕ್ಷೇತ್ರಗಳ ಸಾಧಕರಿಗೆ ಕನಿಷ್ಠ ವಿದ್ಯಾರ್ಹತೆ ಅನ್ವಯವಾಗುವುದಿಲ್ಲ.

* ಪರಿಷತ್ತಿನ ಸಿಬ್ಬಂದಿ ವೇತನ ಹೆಚ್ಚಳ, ಬಡ್ತಿ ನೀಡುವುದು, ಶಿಸ್ತು ಕ್ರಮ ಜರುಗಿಸುವ ಮತ್ತು ಕೆಲಸದಿಂದ ವಜಾಗೊಳಿಸುವ ಅಧಿಕಾರವನ್ನು ಕೇಂದ್ರ ಪರಿಷತ್ತಿನ ಅಧ್ಯಕ್ಷರಿಗೆ ನೀಡಲು ಪ್ರಸ್ತಾಪಿಸಲಾಗಿದೆ. ಇಲ್ಲಿಯವರೆಗೆ ಕಾರ್ಯಕಾರಿ ಸಮಿತಿಗೆ ಈ ಅಧಿಕಾರವಿತ್ತು.

* ವಿವಿಧ ಘಟಕಗಳಿಗೆ ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದಕ್ಕೆ ಅನುಮತಿ ನೀಡುವ ಅಧಿಕಾರ ಕೇಂದ್ರ ಪರಿಷತ್ತಿನ ಅಧ್ಯಕ್ಷರಿಗೆ.

* ಕಸಾಪದ ಗೌರವ ಕಾರ್ಯದರ್ಶಿ, ಗೌರವ ಸಂಘಟನಾ ಕಾರ್ಯದರ್ಶಿ, ಗೌರವ ಕೋಶಾಧ್ಯಕ್ಷ ಹಾಗೂ ಉಳಿದ ಪ್ರತಿನಿಧಿಗಳು ಅಥವಾ ಪದನಿಮಿತ್ತ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರ ಪರಿಷತ್ತಿನ ಅಧ್ಯಕ್ಷರ ಬಳಿ ಇರಲಿದೆ.

* ಪರಿಷತ್ತಿನ ಸದಸ್ಯತ್ವ ಶುಲ್ಕದಲ್ಲಿ ಇಳಿಕೆ ಹಾಗೂ ಆ್ಯಪ್‌ ಮೂಲಕ ಎಲ್ಲ ಹಂತದ ಮತದಾನ

* ವಿವಿಧ ಘಟಕಗಳು ಪ್ರತಿ ಮೂರು ತಿಂಗಳಿಗೊಮ್ಮೆ ಮತ್ತು ಹಣಕಾಸು ವರ್ಷದ ಅಂತ್ಯದ ನಂತರದ ಮೇ ತಿಂಗಳ ಕೊನೆಯ ಒಳಗೆ ಲೆಕ್ಕಪತ್ರಗಳನ್ನು ಕೇಂದ್ರ ಪರಿಷತ್ತಿನ ಅಧ್ಯಕ್ಷರಿಗೆ ತಲುಪಿಸಬೇಕು.

* ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಸದಸ್ಯರು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.