ADVERTISEMENT

ವೇತನ ವಿಳಂಬ: ಸಂಕಷ್ಟದಲ್ಲಿ ಆರೋಗ್ಯ ಕಾರ್ಯಕರ್ತರು

ಮಾರ್ಚ್‌ ತಿಂಗಳ ಸಂಬಳವೂ ಸಿಕ್ಕಿಲ್ಲ!

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 20:25 IST
Last Updated 24 ಏಪ್ರಿಲ್ 2020, 20:25 IST
ಮೈಸೂರಿನ ಗೋಕುಲಂನಲ್ಲಿ ಮನೆಮನೆ ಸಮೀಕ್ಷೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು.
ಮೈಸೂರಿನ ಗೋಕುಲಂನಲ್ಲಿ ಮನೆಮನೆ ಸಮೀಕ್ಷೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು.   

ಬೆಂಗಳೂರು: ಕೊರೊನಾ ಸೋಂಕಿನ ವಿರುದ್ಧ ಆಸ್ಪತ್ರೆಯ ಒಳಗೆ ಹಾಗೂ ಹೊರಗೆ ಅಕ್ಷರಶಃ ಹೋರಾಟವನ್ನೇ ನಡೆಸುತ್ತಿರುವಆರೋಗ್ಯ ಕಾರ್ಯಕರ್ತರು ಹಾಗೂ ಸಿಬ್ಬಂದಿ ಸಕಾಲದಲ್ಲಿ ವೇತನ ಸಿಗದೇ ಪರದಾಡುತ್ತಿದ್ದಾರೆ.

ಕೋವಿಡ್‌ ಆಸ್ಪತ್ರೆಗಳಲ್ಲಿ ವೈದ್ಯರಂತೆ ರೋಗಿಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಆರೋಗ್ಯ ಸಿಬ್ಬಂದಿ, ಹಗಲು ರಾತ್ರಿ ಎನ್ನದೇ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ರೀತಿ, ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ, ಜನರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಭೀತಿಯ ನಡುವೆಯೇ ಕಂಟೈನ್‌ಮೆಂಟ್‌ ವಲಯಗಳಲ್ಲಿಯೂ ಸೋಂಕು ಶಂಕಿತರನ್ನು ಪತ್ತೆ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಎಂ) ಸುಮಾರು 30 ಸಾವಿರ ಸಿಬ್ಬಂದಿ ಇದ್ದಾರ. ಅವರ ಪೈಕಿ ಹೊರಗುತ್ತಿಗೆ ನೌಕರರು ₹ 8 ಸಾವಿರದಿಂದ ₹ 15 ಸಾವಿರ ವೇತನಕ್ಕೆ ದುಡಿಯುತ್ತಿದ್ದಾರೆ.

ಮಾರ್ಚ್‌ ತಿಂಗಳ ವೇತನ ಬಹುತೇಕ ಸಿಬ್ಬಂದಿಗೆ ಈವರೆಗೂ ಪಾವತಿಯಾಗಿಲ್ಲ. ಇದರಿಂದಾಗಿ ಲಾಕ್‌ ಡೌನ್‌ ಅವಧಿಯಲ್ಲಿ ಕೊರೊನಾ ಜತೆಗೆ ಸೆಣಸುತ್ತಾ ಜೀವನ ಸಾಗಿಸಲಾಗದೆ ಕೆಲವರು ಕಂಗಾಲಾಗಿದ್ದಾರೆ. ಈ ಬಗ್ಗೆ ಇಲಾಖೆಗೂ ಪತ್ರ ಬರೆದಿದ್ದಾರೆ.

ADVERTISEMENT

ಸರ್ಕಾರ ಸ್ಪಂದಿಸಲಿ: ‘ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಆರೋಗ್ಯ ಕಾರ್ಯಕಾರ್ತರು ಹಾಗೂ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ವೇತನ ಸಿಗುತ್ತಿಲ್ಲ. ಈ ಬಗ್ಗೆ ಹಲವು ಬಾರಿ ಸರ್ಕಾರಕ್ಕೆ ಒತ್ತಾಯ ಮಾಡಿದರೂ ಪ್ರಯೋಜನವಾಗಲಿಲ್ಲ. ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ನಾವು ಕೂಡ ಪ್ರಮುಖ ಪಾತ್ರ ವಹಿಸುತ್ತಿದ್ದೇವೆ. ಆದರೆ, ನಮ್ಮ ಬೇಡಿಕೆಗಳಿಗೆ ಬೆಲೆ ಇಲ್ಲದಂತಾಗಿದೆ’ ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ವಿಶ್ವಾರಾಧ್ಯ ಎಚ್. ಯಮೋಜಿ ಬೇಸರ ವ್ಯಕ್ತಪಡಿಸಿದರು. ‌

‘ವೈದ್ಯರಿಗೆ ಸಮಸ್ಯೆಯಾದಲ್ಲಿ ಸರ್ಕಾರ ಕೂಡಲೇ ಸ್ಪಂದಿಸುತ್ತದೆ. ಆದರೆ, ನಾವು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಎಂದು ಹಲವು ವರ್ಷಗಳಿಂದ ಕೇಳಿಕೊಳ್ಳುತ್ತಿದ್ದರೂ ನಮ್ಮ ಧ್ವನಿ ಸರ್ಕಾರಗಳಿಗೆ ಕೇಳಿಸುತ್ತಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಜವಾಬ್ದಾರಿ ಸರ್ಕಾರದ ಮೇಲಿದ್ದು, ನಮ್ಮ ಸೇವೆಯನ್ನೂ ಪರಿಗಣಿಸಲಿ’ ಎಂದರು

ಆರೋಗ್ಯ ಕಾರ್ಯಕರ್ತರು ಹಾಗೂ ಸಿಬ್ಬಂದಿಯ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ವೇತನದ ಕಡತವನ್ನು ಆರ್ಥಿಕ ಇಲಾಖೆಗೆ ಸಲ್ಲಿಸಲಾಗಿದೆ ಎಂದುಆರೋಗ್ಯ ಇಲಾಖೆ ನಿರ್ದೇಶಕ ಓಂ ಪ್ರಕಾಶ್ ಪಾಟೀಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.