ಬೆಂಗಳೂರು: ಖಾಸಗಿ ಕಂಪನಿ ಅಥವಾ ಸಂಸ್ಥೆಗಳಲ್ಲಿ ತಿಂಗಳಿಗೆ ₹30 ಸಾವಿರಕ್ಕಿಂತ ಹೆಚ್ಚು ಸಂಬಳ ಪಡೆಯುವ ಯಾವುದೇ ಸಹಕಾರಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ಅರ್ಹರಾಗುವುದಿಲ್ಲ.
ಸಹಕಾರ ಇಲಾಖೆ 2025–26ನೇ ಸಾಲಿನ ಯಶಸ್ವಿನಿ ಯೋಜನೆಗೆ ಅರ್ಹ ಸಹಕಾರಿಗಳನ್ನು ನೋಂದಣಿ ಮಾಡಿಕೊಳ್ಳಲು ಆದೇಶ ಹೊರಡಿಸಿದ್ದು, ಡಿ.31ರವರೆಗೆ ಅವಕಾಶ ನೀಡಿದೆ.
ಸಮಾಪನಗೊಂಡಿರುವ, ನಿಷ್ಕ್ರಿಯವಾಗಿರುವ ಸಹಕಾರ ಸಂಘಗಳ ಸದಸ್ಯರು, ನೌಕರರ ಸಹಕಾರ ಸಂಘಗಳ ಸದಸ್ಯರು ಯೋಜನೆಗೆ ಅರ್ಹರಾಗಿರುವುದಿಲ್ಲ. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯ ಸರ್ಕಾರಿ ನೌಕರರಾಗಿದ್ದರೂ ಸೌಲಭ್ಯ ಸಿಗುವುದಿಲ್ಲ. ಈಗಾಗಲೇ ಒಂದು ಯೋಜನೆ ಅಡಿ ಆರೋಗ್ಯ ಸೌಲಭ್ಯ ಪಡೆಯುತ್ತಿರುವವರು ಯಶಸ್ವಿನಿ ಅಡಿ ನೋಂದಾಯಿಸಿಕೊಳ್ಳುವಂತಿಲ್ಲ ಎಂದು ವಿವರಿಸಲಾಗಿದೆ.
ಗ್ರಾಮೀಣ ಪ್ರದೇಶದ ಒಂದು ಕುಟುಂಬದಲ್ಲಿ ನಾಲ್ಕು ಜನರಿದ್ದರೆ ಆ ಕುಟುಂಬ ₹500 ವಂತಿಗೆ ಭರಿಸಬೇಕು. ನಾಲ್ಕಕಿಂತ ಹೆಚ್ಚು ಸದಸ್ಯರಿದ್ದರೆ ತಲಾ ₹100 ಹೆಚ್ಚುವರಿ ವಂತಿಗೆ ನೀಡಬೇಕು. ನಗರ ಪ್ರದೇಶದ ಒಂದು ಕುಟುಂಬದಲ್ಲಿ ನಾಲ್ಕು ಜನರಿದ್ದರೆ ₹1,000 ಹಾಗೂ ಅದಕ್ಕಿಂತ ಹೆಚ್ಚು ಜನರಿದ್ದರೆ ತಲಾ ₹200 ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಂದ ಯಾವುದೇ ವಂತಿಗೆ ಸಂಗ್ರಹಿಸುವಂತಿಲ್ಲ.
ಈ ಯೋಜನೆ ಅಡಿ 2,128 ಚಿಕಿತ್ಸೆಗಳಿಗೆ ನಗದುರಹಿತ ಸೌಲಭ್ಯ ದೊರಕಲಿದೆ. ಈ ಸಾಲಿನಲ್ಲಿ ಒಟ್ಟು 50 ಲಕ್ಷ ಫಲಾನುಭವಿಗಳನ್ನು ನೋಂದಣಿ ಮಾಡುವ ಗುರಿ ಹೊಂದಲಾಗಿದೆ ಎಂದು ಸಹಕಾರ ಇಲಾಖೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.