
ಸಾಲುಮರದ ತಿಮ್ಮಕ್ಕ
ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ (114) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು (ಶುಕ್ರವಾರ) ಮೃತಪಟ್ಟಿದ್ದಾರೆ. ಸಾಲುಮರದ ತಿಮ್ಮಕ್ಕ ಅವರ ನಿಧನಕ್ಕೆ ರಾಜಕೀಯ ಗಣ್ಯರು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.
‘ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಸಾವಿರಾರು ಗಿಡಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ಸಲಹಿದ ತಿಮ್ಮಕ್ಕನವರು ತಮ್ಮ ಬಹುಪಾಲು ಜೀವಿತ ಕಾಲವನ್ನು ಪರಿಸರ ಸಂರಕ್ಷಣೆಗಾಗಿ ಮುಡಿಪಾಗಿಟ್ಟವರು. ಇಂದು ತಿಮ್ಮಕ್ಕನವರು ನಮ್ಮನ್ನು ಅಗಲಿದರೂ ಅವರ ಪರಿಸರ ಪ್ರೇಮ ಅವರನ್ನು ಚಿರಸ್ಥಾಯಿಯಾಗಿಸಿದೆ. ಅಗಲಿದ ಮಹಾಚೇತನಕ್ಕೆ ನನ್ನ ನಮನಗಳು. ಸಾಲುಮರದ ತಿಮ್ಮಕ್ಕನವರ ನಿಧನದಿಂದ ನಾಡು ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ವರ್ಗಕ್ಕೆ ನನ್ನ ಸಂತಾಪಗಳು’ ಎಂದು ಸಿಎಂ ಸಿದ್ದರಾಮಯ್ಯ ಅವರು ಬರೆದುಕೊಂಡಿದ್ದಾರೆ.
‘ಮರಗಳನ್ನೇ ತಮ್ಮ ಮಕ್ಕಳಂತೆ ಸಾಕಿ ಸಲಹಿದ ‘ವೃಕ್ಷಮಾತೆ’ ಎಂದೇ ಪ್ರಸಿದ್ಧರಾಗಿದ್ದ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರು ನಿಧನರಾದ ಸುದ್ದಿ ಅತೀವ ದುಖಃ ನೀಡಿದೆ. ನಿಸರ್ಗ ಪ್ರೀತಿಯ ಮೂಲಕ ಇಡೀ ಜಗತ್ತಿಗೆ ಮಾದರಿಯಾಗಿದ್ದ ಅವರ ಅಸಾಮಾನ್ಯ ಬದುಕು ಮತ್ತು ಪರಿಸರಕ್ಕೆ ಅವರ ಕೊಡುಗೆ ಚಿರಸ್ಮರಣೀಯ. ವೃಕ್ಷಮಾತೆ ತಿಮ್ಮಕ್ಕ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕಾರ್ಯ ಸದಾ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿ ಉಳಿಯಲಿದೆ’ ಎಂದು ಡಿಸಿಎಂ. ಡಿ.ಕೆ ಶಿವಕುಮಾರ್ ಅವರು ಬರೆದುಕೊಂಡಿದ್ದಾರೆ.
‘ಜಯನಗರದ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ, ವೃಕ್ಷಮಾತೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ ಪಾರ್ಥಿವ ಶರೀರಕ್ಕೆ ಭಾವಪೂರ್ಣ ಅಂತಿಮ ನಮನ ಸಲ್ಲಿಸಿದೆ. ಮರಗಳನ್ನು ಮಕ್ಕಳಂತೆ ಬೆಳೆಸಿದ ಈ ಮಹಾತಾಯಿ, ಪರಿಸರ ಪ್ರೇಮದ ಜೀವಂತ ರೂಪ. ಅವರ ನಿಸ್ವಾರ್ಥ ಸೇವೆ, ಸರಳತೆ, ಮಮತೆ ಇವೆಲ್ಲವೂ ನಮ್ಮೆಲ್ಲರಿಗೂ ಶಾಶ್ವತ ಪ್ರೇರಣೆ’ ಎಂದು ಈಶ್ವರ್ ಖಂಡ್ರೆ ಬರೆದುಕೊಂಡಿದ್ದಾರೆ.
‘ಹಸಿರು ತಾಯಿ ಕೊನೆಯುಸಿರು. ಪದ್ಮಶ್ರೀ ಪುರಸ್ಕೃತೆ, ಪರಸರ ಪ್ರೇಮಿ, ಲಕ್ಷಾಂತರ ಗಿಡಗಳನ್ನು ಮಕ್ಕಳಂತೆ ಸಾಕಿ ಸಲಹಿದ ವೃಕ್ಷಮಾತೆ ಎಂದೇ ಹೆಸರುವಾಸಿಯಾಗಿದ್ದ ಸಾಲುಮರದ ತಿಮ್ಮಕ್ಕ ಅವರು ಉಸಿರಾಟದ ಸಮಸ್ಯೆಯಿಂದ ನಿಧನರಾಗಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಮರಗಳನ್ನು ನೆಟ್ಟು ಪೋಷಿಸುವ ಮೂಲಕ ಇಡೀ ಜಗತ್ತಿಗೆ ಮಾದರಿಯಾಗಿದ್ದ ಸಾಲುಮರದ ತಿಮ್ಮಕ್ಕ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಸ್ಥರಿಗೆ ದೇವರು ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ’ ಎಂದು ಡಿ.ಕೆ. ಸುರೇಶ್ ಅವರು ಬರೆದುಕೊಂಡಿದ್ದಾರೆ.
‘ಪರಿಸರಕ್ಕಾಗಿ ತಮ್ಮ ಇಡೀ ಬದುಕನ್ನೇ ಮುಡಿಪಿಟ್ಟು ಪ್ರಕೃತಿಗಾಗಿಯೇ ಬದುಕಿ ಬಾಳಿದ ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು. ನಾಡಿಗೆ ಅವರು ನೀಡಿರುವ ಕೊಡುಗೆ, ಅವರಿಂದ ದೊರೆತಿರುವ ಪ್ರೇರಣೆ ಅಜರಾಮರ. ಅಗಲಿದ ಆ ಚೇತನಕ್ಕೆ ಚಿರಶಾಂತಿ ದೊರೆಯಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ’ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಬರೆದುಕೊಂಡಿದ್ದಾರೆ.
‘ಪದ್ಮಶ್ರೀ ಪುರಸ್ಕೃತೆ, ಪರಿಸರವಾದಿ ಹಸಿರೆ ಉಸಿರು ಎಂದು ಜೀವಿಸಿದ್ದ ವೃಕ್ಷಮಾತೆ, ಶತಾಯುಷಿ ಸಾಲು ಮರದ ತಿಮ್ಮಕ್ಕ ಅವರ ನಿಧನದ ಸುದ್ದಿ ಮನಸ್ಸಿಗೆ ಅತೀವ ನೋವು ತಂದಿದೆ. ಹಸಿರಿಲ್ಲದೆ ಬದುಕಿಲ್ಲ ಎಂದು ಜಗತ್ತಿಗೆ ತೋರಿಸಿಕೊಟ್ಟ ಮಾನವತಾವಾದಿ, ಮರಗಳನ್ನು ತಮ್ಮ ಮಕ್ಕಳಂತೆ ಪೋಷಿಸಿ ಬೆಳೆಸಿ ಪರಿಸರ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರ ಪರಿಸರ ಸೇವೆ ಇಡೀ ಮನುಕುಲಕ್ಕೆ ಮಾದರಿ. ತಿಮ್ಮಕ್ಕನವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ’ ಎಂದು ಎಚ್.ಡಿ. ದೇವೇಗೌಡ ಅವರು ಬರೆದುಕೊಂಡಿದ್ದಾರೆ.
‘ನಾಡಿನ ಹಿರಿಯಚೇತನ, ವೃಕ್ಷಮಾತೆ ಪದ್ಮಶ್ರೀ ಶ್ರೀ ಸಾಲುಮರದ ತಿಮ್ಮಕ್ಕ ಅವರ ಅಗಲಿಕೆಯ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖವಾಯಿತು. ಅವರಿಗೆ ನನ್ನ ಭಾವಪೂರ್ಣ ನಮನಗಳು. ಸಸಿಗಳನ್ನೇ ಮಕ್ಕಳೆಂದು ಭಾವಿಸಿ, ನೀರು ಎರೆದು ಅವುಗಳನ್ನು ಪೋಷಿಸಿ ಸಾವಿರಾರು ಮರಗಳನ್ನು ಬೆಳೆಸುವ ಮುಖೇನ ವಿಶ್ವಕ್ಕೆ ಮಾದರಿಯಾಗಿದ್ದರು. ಯಾವುದೇ ಸ್ವಾರ್ಥ, ಫಲಾಪೇಕ್ಷೆಯಿಲ್ಲದೆ ಪರಿಸರ ಮತ್ತು ಜೀವಸಂಕುಲವನ್ನು ಸಂರಕ್ಷಿಸಿದ ಮಾತೆ ಸಾಲುಮರದ ತಿಮ್ಮಕ್ಕನವರ ಕೊಡುಗೆ ಅವಿಸ್ಮರಣೀಯ. ಅವರ ಅಗಲಿಕೆಯು ನಾಡಿಗೆ ಮತ್ತು ಪರಿಸರ ಲೋಕಕ್ಕೆ ತುಂಬಲಾಗದ ನಷ್ಟ. ನಾಡು ಅವರನ್ನು ಸದಾ ಸ್ಮರಿಸಲಿದೆ. ಮೃತರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ. ದುಃಖತಪ್ತ ಅವರ ಕುಟುಂಬವರ್ಗ, ಅಭಿಮಾನಿಗಳ ಬಳಗ ಹಾಗೂ ಪರಿಸರ ಪ್ರೇಮಿಗಳಿಗೆ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವೆ’ ಎಂದು ಜಿ. ಪರಮೇಶ್ವರ್ ಅವರು ಬರೆದುಕೊಂಡಿದ್ದಾರೆ.
‘ವೃಕ್ಷಮಾತೆ, ಶತಾಯುಷಿ, ಪದ್ಮಶ್ರೀ, ಸಾಲುಮರದ ತಿಮ್ಮಕ್ಕ ಅವರ ಅಗಲಿಕೆಯ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಸಾವಿರಾರು ಮರಗಳನ್ನು ನೆಟ್ಟು, ನಿಸರ್ಗದೊಂದಿಗೆ ಮಾನವನ ಬಾಂಧವ್ಯವನ್ನು ಮರುಜೀವಗೊಳಿಸಿದ ತಿಮ್ಮಕ್ಕವರು ಪರಿಸರ ಪ್ರೇಮದ ಜೀವಂತ ರೂಪವಾಗಿದ್ದರು. ಅವರು ನೆಟ್ಟ ಮರಗಳು, ನೀಡಿದ ನೆರಳು, ಸೃಷ್ಟಿಸಿದ ಹಸಿರು ಉಸಿರು-ಎಲ್ಲವೂ ಅವರ ಅಸಾಮಾನ್ಯ ಸೇವೆಯ ಶಾಶ್ವತ ಸ್ಮಾರಕಗಳಾಗಿವೆ. ವೃಕ್ಷಗಳ ಸಂರಕ್ಷಣೆಗೆ ಅವರ ಕೊಡುಗೆ, ಮುಂದಿನ ಪೀಳಿಗೆಗಳಿಗೂ ಮಾರ್ಗದರ್ಶಕವಾಗಿರಲಿದೆ.ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಪರಿಸರಪ್ರೀತಿ ಮತ್ತು ಸೇವಾಭಾವಕ್ಕೆ ಕೋಟಿ ವಂದನೆಗಳು’ ಎಂದು ಎಂ.ಬಿ ಪಾಟೀಲ್ ಅವರು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.