
ಬೆಂಗಳೂರು: ಸೌಜನ್ಯ ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಅದರ ಧರ್ಮಾಧಿಕಾರಿ ಹಾಗೂ ಅವರ ಕುಟುಂಬವನ್ನು ದೂಷಿಸಿ ಯೂ–ಟ್ಯೂಬ್ ಚಾನಲ್‌ನಲ್ಲಿ ವಿಡಿಯೊ ಪ್ರಸಾರ ಮಾಡಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಎಂ.ಡಿ.ಸಮೀರ್ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿದ ಅರ್ಜಿ ವಿಚಾರಣೆಯನ್ನು ಧಾರವಾಡ ಹೈಕೋರ್ಟ್ ಪೀಠಕ್ಕೆ ವರ್ಗಾಯಿಸಲಾಗಿದೆ.
ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಕೋರಿ ಎಂ.ಡಿ.ಸಮೀರ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರು ಮಂಗಳವಾರ ಬೆಂಗಳೂರು ಪ್ರಧಾನ ಪೀಠದಲ್ಲಿ ವಿಚಾರಣೆ ನಡೆಸಿದರು.
‘ಈ ಅರ್ಜಿಯ ವಿಚಾರಣಾ ವ್ಯಾಪ್ತಿಯನ್ನು ಧಾರವಾಡ ಹೈಕೋರ್ಟ್ ಪೀಠ ಹೊಂದಿರುವ ಕಾರಣ ಅರ್ಜಿಯನ್ನು ಧಾರವಾಡ ಪೀಠಕ್ಕೆ ವರ್ಗಾಯಿಸಲಾಗುತ್ತಿದೆ. ಸಮೀರ್ ಹೊಸದಾಗಿ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ’ ಎಂದು ತಿಳಿಸಿದರು.
ಪ್ರಕರಣವೇನು?: ಯೂ ಟ್ಯೂಬರ್ ಸಮೀರ್, ಸೌಜನ್ಯ ಕೊಲೆ ಪ್ರಕರಣ ಮುಂದಿಟ್ಟುಕೊಂಡು ಶ್ರೀಕ್ಷೇತ್ರ ಧರ್ಮಸ್ಥಳ, ಅದರ ಧರ್ಮಾಧಿಕಾರಿ ಮತ್ತವರ ಕುಟುಂಬದ ವಿರುದ್ಧ ಪರೋಕ್ಷವಾಗಿ ಆರೋಪಗಳನ್ನು ಮಾಡಿ ‘ಊರಿಗೆ ದೊಡ್ಡವರೇ ಕೊಲೆ ಮಾಡಿದವರಾ?ʼ ಎಂಬ ತಲೆಬರಹದ ವಿಡಿಯೊವನ್ನು ದೂತ: ಸಮೀರ್ ಎಂ.ಡಿ ಎಂಬ ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಈ ವಿಡಿಯೊವನ್ನು ಕೋಟ್ಯಂತರ ಜನ ವೀಕ್ಷಣೆ ಮಾಡಿದ್ದರು. ಇದನ್ನು ಆಧರಿಸಿ, ಬಳ್ಳಾರಿ ಪೊಲೀಸರು ಸ್ವಯಂಪ್ರೇರಿತವಾಗಿ ಸಮೀರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.