ADVERTISEMENT

ಮರಳು ದಂಧೆಕೋರರಿಂದ ಹಲ್ಲೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 14:31 IST
Last Updated 6 ಜುಲೈ 2019, 14:31 IST

ಜಾಲಹಳ್ಳಿ (ರಾಯಚೂರು): ಮರಳು ದಂಧೆಕೋರರು ಸಾಮಾಜಿಕ‌ ಕಾರ್ಯಕರ್ತ ಶಹಾಪುರ ತಾಲ್ಲೂಕಿನ ಕೊಳ್ಳೂರ ಗ್ರಾಮದ ಹನುಮಂತಪ್ಪ ಭಂಗಿ ಅವರನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ದುಶುಕ್ರವಾರ ತಡರಾತ್ರಿ ತೀವ್ರವಾಗಿ ಹಲ್ಲೆ ಮಾಡಿದ್ದಾರೆ.

‘ಮಾಜಿ ಸಂಸದ ಬಿ.ವಿ‌.ನಾಯಕ ಅವರ ಸೋದರಳಿಯ ಶ್ರೀನಿವಾಸ ನಾಯಕ ಮತ್ತು ಅಶೋಕ, ರವಿ ಯಾದಗಿರಿ ಸೇರಿದಂತೆ ಇತರೆ ನಾಲ್ಕು ಜನರು ಹಲ್ಲೆ ಮಾಡಿದ್ದಾರೆ‌’ ಎಂದು ಹನುಮಂತಪ್ಪ ದೂರು ನೀಡಿದ್ದು, ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬಾಗೂರು‌ ಗ್ರಾಮದಲ್ಲಿ ಅಕ್ರಮ ಮರಳು ಸಂಗ್ರಹ ಸ್ಥಳಕ್ಕೆ ಹೋಗಿ ಚಿತ್ರ ಸೆರೆಹಿಡಿಯುತ್ತಿದ್ದೆ.ಇದನ್ನು ಗಮನಿಸಿದ ಮರಳು ದಂಧೆಕೋರರು ನನ್ನಮೇಲೆ ಮನ ಬಂದಂತೆ ಹಲ್ಲೆ ಮಾಡಿದರು. ಆನಂತರ ಚಿಂಚೋಡಿ, ತಿಂಥಣಿ ಬ್ರಿಜ್, ಸುರಪುರ ಸಮೀಪ ತಿಮ್ಮಾಪುರ,ಶಹಾಪುರ, ಯಾದಗಿರಿ, ಸೈದಾಪುರ, ರಾಯಚೂರಿಗೆ ಕರೆದುಕೊಂಡು ಹೋಗಿ ಅಲ್ಲಿಯೂ ಹಲ್ಲೆ ನಡೆಸಿದರು’ ಎಂದು ಅವರುದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಮರಳು ಗಣಿಗಾರಿಕೆ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದೇನೆ. ಅದನ್ನು ವಾಪಸ್‌ ಪಡೆಯುವಂತೆ ಆರೋಪಿಗಳು ಬೆದರಿಕೆ ಹಾಕಿದ್ದಾರೆ’ ಎಂದು ಹನುಮಂತಪ್ಪ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.