ADVERTISEMENT

‘ಡ್ರಗ್ಸ್’: ಕಿರುತೆರೆ ನಟ–ನಟಿ ವಿಚಾರಣೆ

ಐಎಸ್‌ಡಿ ತನಿಖೆ; 25ಕ್ಕೂ ಹೆಚ್ಚು ಮಂದಿಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 19:58 IST
Last Updated 22 ಸೆಪ್ಟೆಂಬರ್ 2020, 19:58 IST

ಬೆಂಗಳೂರು: ಡ್ರಗ್ಸ್ ಜಾಲದ ತನಿಖೆ ಆರಂಭಿಸಿರುವ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸರು, ಕಿರುತೆರೆ ನಟ ಅಭಿಷೇಕ್ ಹಾಗೂ ನಟಿ ಗೀತಾ ಭಾರತಿ ಭಟ್ ಅವರನ್ನು ಮಂಗಳವಾರ ವಿಚಾರಣೆಗೆ ಒಳಪಡಿಸಿದರು.

ನಗರದ ಕೆಲ ಪಾರ್ಟಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪದಡಿ ಕೇರಳದ ರಾನ್ ಡ್ಯಾನಿಯಲ್ (22) ಹಾಗೂ ಗೋಕುಲ ಕೃಷ್ಣ (24) ಎಂಬಾತನನ್ನು ಇತ್ತೀಚೆಗಷ್ಟೇ ಐಎಸ್‌ಡಿ ಪೊಲೀಸರು ಬಂಧಿಸಿದ್ದರು. ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದರು. ಅವರಿಬ್ಬರ ಹೇಳಿಕೆ ಆಧರಿಸಿ ಇದೀಗ ತನಿಖೆ ಚುರುಕುಗೊಳಿಸಿದ್ದಾರೆ.

‘ಲೂಸ್ ಮಾದ’ ಖ್ಯಾತಿಯ ನಟ ಯೋಗೀಶ್, ಕ್ರಿಕೆಟಿಗ ಎನ್‌.ಸಿ.ಅಯ್ಯಪ್ಪ ಸೇರಿದಂತೆ ಹಲವರನ್ನು ಈಗಾಗಲೇ ವಿಚಾರಣೆ ನಡೆಸಿದ್ದ ಐಎಸ್‌ಡಿ, ‘ಗಟ್ಟಿಮೇಳ’ ಧಾರಾವಾಹಿ ನಟ ಅಭಿಷೇಕ್ ಹಾಗೂ ‘ಬ್ರಹ್ಮಗಂಟು’ ಧಾರಾವಾಹಿ ನಟಿ ಗೀತಾ ಭಾರತಿ ಭಟ್‌ ಅವರಿಗೆ ನೋಟಿಸ್‌ ನೀಡಿತ್ತು.

ADVERTISEMENT

ಮಂಗಳವಾರ ಬೆಳಿಗ್ಗೆ 10.30ಕ್ಕೆ ಶಾಂತಿನಗರದಲ್ಲಿರುವ ಐಎಸ್‌ಡಿ ಕಚೇರಿಯಲ್ಲಿ ವಿಚಾರಣೆಗೆ ಅಭಿಷೇಕ್ ಹಾಗೂ ಗೀತಾ ಭಟ್ ಹಾಜರಾದರು. ಎರಡು ಗಂಟೆ ವಿಚಾರಣೆ ನಡೆಸಿದ ಪೊಲೀಸರು, 30ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಅವರಿಬ್ಬರಿಂದ ಲಿಖಿತ ಉತ್ತರ ಪಡೆದು ವಾಪಸ್‌ ಕಳುಹಿಸಿದರು ಎಂದು ಗೊತ್ತಾಗಿದೆ. ಸುದ್ದಿಗಾರರ ಜೊತೆ ಮಾತನಾಡಿದ ಅಭಿಷೇಕ್, ‘ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಧಿಸಿದ್ದು, ಆತನ ಬಗ್ಗೆ ಮಾಹಿತಿ ಬೇಕೆಂದು ಹೇಳಿ ಪೊಲೀಸರು ವಿಚಾರಣೆಗೆ ಕರೆಸಿದ್ದಾರೆ. ಆತ ಯಾರು ಎಂಬುದೇ ನನಗೆ ಗೊತ್ತಿಲ್ಲ. ನನ್ನ ಸ್ನೇಹಿತರು ಹಾಗೂ ಪರಿಚಯಸ್ಥರಲ್ಲಿ ಯಾರಿಗೂ ಡ್ರಗ್ಸ್ ಸೇವಿಸುವ ಅಭ್ಯಾಸ
ವಿಲ್ಲ. ವಿಚಾರಣೆ ವೇಳೆ ಪೊಲೀಸರ ಪ್ರಶ್ನೆಗೆ ಉತ್ತರಿಸಿದ್ದೇನೆ.

ಗೀತಾ ಭಾರತಿ ಭಟ್, ‘ತನಿಖೆಗೆ ನನ್ನ ಸಹಕಾರ ನೀಡುತ್ತೇನೆ. ಮಾಹಿತಿ ಪಡೆಯಲು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಹಲವರು ನನ್ನನ್ನೇ ಆರೋಪಿಯನ್ನಾಗಿ ನೋಡುತ್ತಿದ್ದಾರೆ. ಅದು ತಪ್ಪು’ ಎಂದರು.

‘ನಗರದ ಹಲವೆಡೆ ಪಾರ್ಟಿಗಳನ್ನು ಆಯೋಜಿಸಲಾಗುತ್ತಿತ್ತು. ಅಲ್ಲೆಲ್ಲ ಪೆಡ್ಲರ್‌ಗಳು, ಎಂಡಿಎಂಎ, ಗಾಂಜಾ ಸೇರಿ ಹಲವು ಬಗೆಯ ಡ್ರಗ್ಸ್ ಮಾರಿದ್ದಾರೆ. ಪಾರ್ಟಿಯಲ್ಲಿ ಪಾಲ್ಗೊಂಡು ಡ್ರಗ್ಸ್ ಸೇವಿಸಿದ್ದ ಆರೋಪದಡಿ 25ಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಅವರೆಲ್ಲರ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಐಎಸ್‌ಡಿ ಅಧಿಕಾರಿಯೊಬ್ಬರು ಹೇಳಿದರು.

ಮಣಿಪುರದ ಯುವತಿ ಬಂಧನ (ಮಂಗಳೂರು ವರದಿ): ಮಂಗಳೂರು: ಮಾದಕ ವಸ್ತು ಸಾಗಣೆ ಹಾಗೂ ಸೇವನೆ ಆರೋಪದಲ್ಲಿ ಈಚೆಗೆ ಬಂಧನಕ್ಕೆ ಒಳಗಾಗಿರುವ ಡ್ಯಾನ್ಸರ್, ನೃತ್ಯ ಸಂಯೋಜಕ ಕಿಶೋರ್ ಶೆಟ್ಟಿ ಜತೆ ಡ್ರಗ್ಸ್ ಪಾರ್ಟಿ ಮಾಡಿದ್ದ ಮಣಿಪುರದ ಯುವತಿ ಆಸ್ಕಾಳನ್ನು ಪೊಲೀಸರು ಬಂಧಿಸಿದ್ದಾರೆ. ಆಸ್ಕಾ ಮಂಗಳೂರಿನ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಈಕೆ ತನ್ನ ಸ್ನೇಹಿತೆಯರ ಜತೆಗೆ ಬಂದು, ಕಿಶೋರ್‌ ಶೆಟ್ಟಿ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದಳು. ಆಸ್ಕಾ ಜತೆ ಆಕೆಯ ಸ್ನೇಹಿತೆ ಒಬ್ಬಳನ್ನೂ ವಶಕ್ಕೆ ಪಡೆದು ರಕ್ತದ ತಪಾಸಣೆ ನಡೆಸಲಾಗಿದೆ. ಆಸ್ಕಾ ಡ್ರಗ್ಸ್‌ ಸೇವನೆ ಮಾಡಿರುವುದು ಖಚಿತವಾಗಿದೆ. ಆಕೆಯ ಸ್ನೇಹಿತೆಯ ವರದಿ ನೆಗೆಟಿವ್‌ ಬಂದಿದೆ ಎಂದು ನಗರ ಪೊಲೀಸ್‌ ಆಯುಕ್ತ ವಿಕಾಸ್‌ ಕುಮಾರ್‌ ವಿಕಾಸ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.