ಬೆಂಗಳೂರು: ‘ಮಹಾರಾಷ್ಟ್ರದ ಸಾಂಗ್ಲಿಯಲ್ಲಿನ ಜಲಾನಯನ ಪ್ರದೇಶಗಳು ವಿಪರೀತ ಒತ್ತುವರಿಯಾಗಿದ್ದು, ಪ್ರವಾಹಕ್ಕೆ ಅದೇ ಕಾರಣ. ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಿಸುವುದರಿಂದ ಪ್ರವಾಹ ಉಂಟಾಗುತ್ತದೆ ಎನ್ನುವ ಸರ್ಕಾರದ ತಕರಾರಿಗೆ ಅರ್ಥವೇ ಇಲ್ಲ’ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾವು ಆಲಮಟ್ಟಿ ಅಣೆಕಟ್ಟೆ ನಿರ್ಮಿಸುವುದಕ್ಕೂ ಮೊದಲೇ ಸಾಂಗ್ಲಿಯಲ್ಲಿ 1964, 1976, 1994 ಮತ್ತು 1997ರಲ್ಲಿ ಭೀಕರ ಪ್ರವಾಹ ತಲೆದೋರಿತ್ತು’ ಎಂದರು.
‘ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 519.60 ಮೀಟರ್‌ನಿಂದ 525.256 ಮೀಟರ್‌ಗೆ ಹೆಚ್ಚಿಸುವುದರಿಂದ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗುತ್ತದ ಎಂದು ಮಹಾರಾಷ್ಟ್ರ ಮಾಡುತ್ತಿರುವ ತಕರಾರನ್ನು ನ್ಯಾಯಮಂಡಳಿ, ಸುಪ್ರೀಂಕೋರ್ಟ್ ಮತ್ತು ಲೋಕಸಭೆಯು ತಿರಸ್ಕರಿಸಿದೆ. ಆದರೆ ಮಹಾರಾಷ್ಟ್ರವು ಈಗಲೂ ಅದೇ ವಾದ ಮಾಡುತ್ತಿದೆ’ ಎಂದರು.
‘ಅಣೆಕಟ್ಟೆಯ ಎತ್ತರವನ್ನು 524.256 ಮೀಟರ್‌ಗಳಿಗೆ ಹೆಚ್ಚಿಸಬಹುದು ಎಂದು ಸುಪ್ರೀಂ ಕೋರ್ಟ್ 2000ನೇ ಇಸವಿಯಲ್ಲೇ ಹೇಳಿದೆ. ಅದರ ವಿರುದ್ಧ ಮಹಾರಾಷ್ಟ್ರ ನ್ಯಾಯಮಂಡಳಿಗೆ ತಕರಾರು ಸಲ್ಲಿಸಿತು. ಆದರೆ, ಅಲ್ಲಿಯೂ ಅದರ ತಕರಾರು ತಿರಸ್ಕೃತವಾಯಿತು. ಎತ್ತರ ಹೆಚ್ಚಿಸುವುದರಿಂದ ಸಾಂಗ್ಲಿ ಮತ್ತು ಕೊಲ್ಹಾಪುರದಲ್ಲಿ ಪ್ರವಾಹ ಉಂಟಾಗುವುದಿಲ್ಲ ಎಂದು ನ್ಯಾಯಮಂಡಳಿಯು 2010 ಮತ್ತು 2013ರಲ್ಲಿ ವಿಸ್ತೃತ ವರದಿ ನೀಡಿದೆ’ ಎಂದು ವಿವರಿಸಿದರು.
‘ಸಾಂಗ್ಲಿಯಲ್ಲಿ ಜಲಾನಯನ ಪ್ರದೇಶಗಳ ಒತ್ತುವರಿಯಿಂದ ಪ್ರವಾಹ ತಲೆದೋರುತ್ತಿದೆ ಎಂಬುದನ್ನು ಸಾಬೀತುಪಡಿಸುವ ವರದಿ ನನ್ನ ಬಳಿ ಇದೆ. ಅದನ್ನು, ಡಿ.ಕೆ.ಶಿವಕುಮಾರ್ ಅವರಿಗೆ ತಲುಪಿಸುತ್ತೇನೆ. ಮಹರಾಷ್ಟ್ರದ ತಕರಾರಿಗೆ ತಕ್ಕ ಉತ್ತರ ಕೊಡುತ್ತೇವೆ. ಅಲ್ಲಿನ ಸರ್ಕಾರ ಒತ್ತುವರಿ ಸಮಸ್ಯೆಯನ್ನು ಬಗೆಹರಿಸುವ ಕಡೆಗೆ ಗಮನ ಕೊಡಬೇಕು. ಅದನ್ನು ಬಿಟ್ಟು ನಮಗೆ ಅಡ್ಡಗಾಲು ಹಾಕಬಾರದು’ ಎಂದು ಆಗ್ರಹಿಸಿದರು.
ನಾವು ಅಣೆಕಟ್ಟೆಯ ಎತ್ತರ ಹೆಚ್ಚಿಸಲು ಮುಂದಾಗಿರುವುದನ್ನು ಮರುಪರಿಶೀಲಿಸಲು ಮಹಾರಾಷ್ಟ್ರವು ಆಗ್ರಹಿಸಿರುವುದು ರಾಜಕೀಯ ದುರುದ್ದೇಶವಲ್ಲದೆ ಮತ್ತೇನಲ್ಲಎಂ.ಬಿ.ಪಾಟೀಲ ಕೈಗಾರಿಕಾ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.