ADVERTISEMENT

ಮನೆಗಳಿಗೆ ಸೀಮಿತವಾದ ಸಂಕ್ರಾಂತಿ ಸಡಗರ

ಹೊಸ ಬಟ್ಟೆ ಧರಿಸಿ ಚಿಣ್ಣರ ಸಂಭ್ರಮ: ಗೋವುಗಳಿಗೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 3:41 IST
Last Updated 16 ಜನವರಿ 2022, 3:41 IST
ಸಂಕ್ರಾಂತಿ ಪ್ರಯುಕ್ತ ಬಾಲಕಿಯರು ಎಳ್ಳು–ಬೆಲ್ಲ ಮತ್ತು ಕಬ್ಬನ್ನು ಪರಸ್ಪರ ಹಂಚುತ್ತಿರುವ ದೃಶ್ಯ ಶನಿವಾರ ನಗರದಲ್ಲಿ ಕಂಡುಬಂತು -ಪ್ರಜಾವಾಣಿ ಚಿತ್ರ 
ಸಂಕ್ರಾಂತಿ ಪ್ರಯುಕ್ತ ಬಾಲಕಿಯರು ಎಳ್ಳು–ಬೆಲ್ಲ ಮತ್ತು ಕಬ್ಬನ್ನು ಪರಸ್ಪರ ಹಂಚುತ್ತಿರುವ ದೃಶ್ಯ ಶನಿವಾರ ನಗರದಲ್ಲಿ ಕಂಡುಬಂತು -ಪ್ರಜಾವಾಣಿ ಚಿತ್ರ    

ಬೆಂಗಳೂರು: ನಗರದಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದ್ದರಿಂದ ಈ ಬಾರಿ ಸಂಕ್ರಾಂತಿ ಹಬ್ಬದ ಸಡಗರವು ಮನೆಗಳಿಗಷ್ಟೇ ಸೀಮಿತವಾಯಿತು.

ವಾರಾಂತ್ಯ ಕರ್ಫ್ಯೂ ಇದ್ದಿದ್ದರಿಂದಹಲವರು ಶುಕ್ರವಾರ ರಾತ್ರಿಯೇ ಕಬ್ಬು, ಹೂವು, ಹಣ್ಣು ಹಾಗೂ ತಳಿರು ತೋರಣಗಳನ್ನು ಖರೀದಿಸಿದರು. ಕೆಲವರು ಇವುಗಳನ್ನು ಕೊಳ್ಳಲು ಶನಿವಾರ ಮುಂಜಾನೆ ಮಾರುಕಟ್ಟೆಗಳಿಗೆ ಎಡತಾಕಿದರು. ಬೀದಿ ಬದಿ ವ್ಯಾಪಾರಿಗಳ ಬಳಿ ಮಾವಿನ ಸೊಪ್ಪು ಹಾಗೂ ಕಬ್ಬು ಖರೀದಿಸಿ ಮನೆಯ ಬಾಗಿಲುಗಳನ್ನು ಸಿಂಗರಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಮಹಿಳೆಯರು ಮುಂಜಾನೆಯೇ ಮನೆಯ ಅಂಗಳಗಳನ್ನು ಸಾರಿಸಿ ರಂಗೋಲಿಗಳ ಚಿತ್ತಾರ ಬಿಡಿಸುತ್ತಿದ್ದರು.

ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಕೋವಿಡ್‌ನಿಂದಾಗಿ ಭಕ್ತರಿಗೆ ದೇಗುಲ ಪ್ರವೇಶ ಇರಲಿಲ್ಲ. ಪುಟಾಣಿಗಳು ಹಾಗೂ ಹಿರಿಯರು ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸಿದರು. ಪರಸ್ಪರ ಎಳ್ಳು ಬೆಲ್ಲ ಹಾಗೂ ಕಬ್ಬು ಹಂಚಿ ಖುಷಿಪಟ್ಟರು. ಮನೆಗಳಲ್ಲಿ ಸಿಹಿ ಪದಾರ್ಥಗಳನ್ನು ತಯಾರಿಸಿ ಸವಿದರು.

ADVERTISEMENT

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಸಂಕ್ರಾಂತಿ ಪ್ರಯುಕ್ತ ರಾಜಭವನದಲ್ಲಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಿಎಂಟಿಸಿ ಅಧ್ಯಕ್ಷ ನಂದೀಶ್‌ ರೆಡ್ಡಿ ತಮ್ಮ ನಿವಾಸದಲ್ಲಿ ಗೋಪೂಜೆ ನೆರವೇರಿಸಿದರು.

ಜಯನಗರದ ಕನಕನಪಾಳ್ಯದ ನಿವಾಸಿಗಳು ಹಸು ಹಾಗೂ ಎತ್ತುಗಳಿಗೆ ಪೂಜೆಮಾಡಿ ಸಂಜೆಯ ಹೊತ್ತಿನಲ್ಲಿ ಕಿಚ್ಚು ಹಾಯಿಸಿ ಸಂಭ್ರಮಿಸಿದರು.

ಎತ್ತಿನ ಗಾಡಿಯಲ್ಲಿ ಸಾಮಾಗ್ರಿ ಸಾಗಿಸುವ ವ್ಯಕ್ತಿಯೊಬ್ಬರು ಸಂಕ್ರಾಂತಿ ಪ್ರಯುಕ್ತ ಜೋಡೆತ್ತುಗಳಿಗೆ ಹೂವು ಹಾಗೂ ಬಣ್ಣದ ಟೇಪ್‌ಗಳನ್ನು ಕಟ್ಟಿ ಸಿಂಗರಿಸಿದ್ದರು. ಅವುಗಳ ಬೆನ್ನು ಹಾಗೂ ಕೊರಳಿಗೆ ಗಂಟೆಗಳನ್ನು ಕಟ್ಟಿದ್ದರು. ಕೊಂಬುಗಳನ್ನು ಬಲೂನುಗಳಿಂದ ಅಲಂಕರಿಸಿದ್ದ ದೃಶ್ಯಎಸ್‌.ಜೆ.ಪಿ.ರಸ್ತೆಯಲ್ಲಿ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.