ADVERTISEMENT

ಶರೀಫಗಿರಿಯಲ್ಲಿ ಜಯಂತ್ಯುತ್ಸವ ಸಡಗರ

ಶರೀಫ ಜಯಂತ್ಯುತ್ಸವ ದ್ವಿಶತಮಾನೋತ್ಸವಕ್ಕೆ ರಾಷ್ಟ್ರಪತಿ–ಪ್ರಧಾನಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 20:12 IST
Last Updated 3 ಜುಲೈ 2018, 20:12 IST

ಶಿಗ್ಗಾವಿ (ಹಾವೇರಿ ಜಿಲ್ಲೆ):ಶಿಶುವಿನಹಾಳ ಶರೀಫರ ಜಯಂತ್ಯುತ್ಸವದ ದ್ವಿಶತಮಾನೋತ್ಸವ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಮತ್ತು ಪ್ರಧಾನಿಯನ್ನು ಆಹ್ವಾನಿಸುವ ಉದ್ದೇಶ ಇದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲ್ಲೂಕಿನ ಶಿಶುವಿನಹಾಳ ಗ್ರಾಮದ ಶರೀಫಗಿರಿ ಭಾವೈಕ್ಯ ಮಂದಿರದಲ್ಲಿ, ಮಂಗಳವಾರ ಸಂತ ಶರೀಫ ಶಿವಯೋಗಿಗಳ 199ನೇ ಜಯಂತ್ಯುತ್ಸವ ಮತ್ತು 129ನೇ ಪುಣ್ಯ ಸ್ಮರಣೋತ್ಸವ ಹಾಗೂ ಗುರುನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶರೀಫರ ದ್ವಿಶತಮಾನೋತ್ಸವ ನಿಮಿತ್ತ ಕಾರ್ಯಕ್ರಮ ಆಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ. ರಾಷ್ಟ್ರಪತಿ, ಪ್ರಧಾನಿ ಜೊತೆ ರಾಷ್ಟ್ರೀಯ ಮುಖಂಡರನ್ನು ಆಹ್ವಾನಿಸಲಾಗುವುದು. ಆಧ್ಯಾತ್ಮಿಕ ಕ್ಷೇತ್ರದ ಸಾಧಕರನ್ನು ಆಮಂತ್ರಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದರು.

ADVERTISEMENT

2019ರ ಜುಲೈ 3ರಂದು ದ್ವಿಶತಮಾನೋತ್ಸವ ಸಮಾರೋಪ ಸಮಾರಂಭ ನಡೆಯಲಿದ್ದು, ಅಲ್ಲಿ ತನಕ ವರ್ಷ ಪೂರ್ತಿ ಕಾರ್ಯಕ್ರಮ ಗಳನ್ನು ನಡೆಸಲು ಯೋಜಿಸಿರುವುದಾಗಿ ಹೇಳಿದರು.

ಇದಕ್ಕೂ ಮೊದಲು ಬೆಳಿಗ್ಗೆ, ವರ್ಷಂಪ್ರತಿ ನಡೆಯುವಂತೆ ಗುರುಗೋವಿಂದ ಭಟ್ಟರು ಮತ್ತು ಶರೀಫರ ಮೂರ್ತಿಗಳ ಹಾಗೂ ಪಾದುಕೆಗಳ ಪೂಜೆ ನಡೆಯಿತು. ತಂದೆ– ತಾಯಿ ಸ್ಮರಣಾರ್ಥಸ್ವತಃ ಶಿಶುನಾಳ ಶರೀಫರೇ ನೆಟ್ಟಿದ್ದ ಬೇವಿನ ಮರದ ಬಳಿಯಲ್ಲಿರುವ ಅವರ ಗದ್ದುಗೆಗೆ ಪೂಜೆ ಸಲ್ಲಿಸಲಾಯಿತು.

ಭಕ್ತರಿಗೆ ಉತ್ತತ್ತಿ ಮತ್ತು ಕಲ್ಲು ಸಕ್ಕರೆ ನೀಡಲಾಯಿತು. ವಾದ್ಯ ವೈಭವದೊಂದಿಗೆ ಶಿಶುವಿನಹಾಳ ಗ್ರಾಮದಿಂದ ಶರೀಫಗಿರಿ ತನಕ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು.

ಬಳಿಕ ಅವರ ಏಕತಾರಿ, ತತ್ವಪದಗಳ ಗಾಯನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.