ADVERTISEMENT

ಸಾರಡ್ಕ ಚೆಕ್‌ ಪೋಸ್ಟ್‌ ಬಂದ್: ಕರ್ನಾಟಕ, ಕೇರಳ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 5:28 IST
Last Updated 21 ಜುಲೈ 2020, 5:28 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಕರ್ನಾಟಕ ಭಾಗದಲ್ಲಿನ ಒಂದು ಕಿಲೋಮೀಟರ್ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಕೋರಿ ಕೇರಳದ ಮೂರು ಹಳ್ಳಿಗಳ ಜನರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ಎರಡು ಸರ್ಕಾರಗಳಿಗೆ ನೋಟಿಸ್ ನೀಡಲು ಹೈಕೋರ್ಟ್‌ ಆದೇಶಿಸಿದೆ.

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲ್ಲೂಕಿನ ರಾಧಾಕೃಷ್ಣ ನಾಯಕ್ ಹಾಗೂ ಇತರರು ಅರ್ಜಿ ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘ದಿನಸಿ, ಕೃಷಿ ಚಟುವಟಿಕೆ, ವೈದ್ಯಕೀಯ ಸೌಲಭ್ಯಕ್ಕೆ ಮೂರು ಗ್ರಾಮಗಳ ಜನರು 15 ಕಿಲೋ ಮೀಟರ್ ದೂರದಲ್ಲಿರುವ ಪೆರ್ಲ ಪಟ್ಟಣವನ್ನೇ ಆಶ್ರಯಿಸಿದ್ದಾರೆ. ‌ಪೆರ್ಲ ಪಟ್ಟಣಕ್ಕೆ ಹೋಗಬೇಕೆಂದರೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಸಾರಡ್ಕಪೊಲೀಸ್ ಚೆಕ್‌ ಪೋಸ್ಟ್‌ ದಾಟಲೇಬೇಕು. ಚೆಕ್‌ ಪೋಸ್ಟ್‌ನಲ್ಲಿ ಜನರು ಮತ್ತು ವಾಹನಗಳ ಸಂಚಾರ ಬಂದ್ ಮಾಡಿರುವ ಕಾರಣ ಸಂಪರ್ಕ ಕಡಿತಗೊಂಡಿದೆ’ ಎಂದು ಅರ್ಜಿದಾರರು ಹೇಳಿದ್ದಾರೆ.

ADVERTISEMENT

‘ಎಣ್ಮಕಜೆ ಗ್ರಾಮ ಪಂಚಾಯಿತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಆದರೂ ಚೆಕ್‌ ಪೋಸ್ಟ್ ತೆರೆದಿಲ್ಲ. ಲಾಕ್‌ಡೌನ್ ಸಡಿಲಗೊಂಡ ಬಳಿಕ ಅಂತರರಾಜ್ಯ ಸಾರಿಗೆಗೆ ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ಮಂಗಳೂರು–ಕಾಸರಗೋಡು ನಡುವೆ ಜನ ಸಂಚಾರಕ್ಕೂ ಅವಕಾಶ ಇದೆ. ಆದರೆ, ಸಾರಡ್ಕ ಚೆಕ್‌ ಪೋಸ್ಟ್ ಮಾತ್ರ ತೆರೆದಿಲ್ಲ’ ಎಂದು ಅರ್ಜಿದಾರರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.