ADVERTISEMENT

‘ಸ್ಮಾರ್ಟ್‌’ ಆದ ಸಾರಕ್ಕಿ ಸರ್ಕಾರಿ ಶಾಲೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 16:33 IST
Last Updated 22 ಅಕ್ಟೋಬರ್ 2021, 16:33 IST
ಸಚಿವ ಬಿ.ಸಿ.ನಾಗೇಶ್‌ ಅವರು ವಿದ್ಯಾರ್ಥಿಯೊಂದಿಗೆ ಸಮಾಲೋಚಿಸಿದರು. ವಿ.ಎಸ್‌.ರೆಡ್ಡಿ ಹಾಗೂ ಶಾಸಕಿ ಸೌಮ್ಯಾ ರೆಡ್ಡಿ ಇದ್ದಾರೆ.
ಸಚಿವ ಬಿ.ಸಿ.ನಾಗೇಶ್‌ ಅವರು ವಿದ್ಯಾರ್ಥಿಯೊಂದಿಗೆ ಸಮಾಲೋಚಿಸಿದರು. ವಿ.ಎಸ್‌.ರೆಡ್ಡಿ ಹಾಗೂ ಶಾಸಕಿ ಸೌಮ್ಯಾ ರೆಡ್ಡಿ ಇದ್ದಾರೆ.   

ಬೆಂಗಳೂರು: ಸಾರಕ್ಕಿಯ ಕರ್ನಾಟಕ ಪಬ್ಲಿಕ್‌ ಶಾಲೆ ಈಗ ಹೈಟೆಕ್‌ ರೂಪ ಪಡೆದುಕೊಂಡಿದ್ದು, ವಿದ್ಯಾರ್ಥಿಗಳಿಗೆ ಆಧುನಿಕ ಹಾಗೂ ಗುಣಮಟ್ಟದ ಶಿಕ್ಷಣ ನೀಡಲು ಸನ್ನದ್ಧವಾಗಿದೆ.

ಬ್ರಿಟಿಷ್‌ ಬಯೊಲಾಜಿಕಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್‌.ರೆಡ್ಡಿ ಅವರು ₹2.25 ಕೋಟಿ ವೆಚ್ಚದಲ್ಲಿ ಈ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಶಾಲೆಯಲ್ಲಿ ನಿರ್ಮಿಸಲಾದ ನಾಲ್ಕು ಅಂತಸ್ತುಗಳ ‘ಶ್ರೀ ಸಾರಕ್ಕಿ ಅಬ್ಬಯ್ಯರೆಡ್ಡಿ ಸ್ಮಾರಕ ಕಟ್ಟಡ’ವನ್ನು ಶುಕ್ರವಾರ ಉದ್ಘಾಟಿಸಿದರು.

‘ವಿ.ಎಸ್.ರೆಡ್ಡಿ ಅವರ ಕಾರ್ಯ ಶ್ಲಾಘನೀಯವಾದುದು. ಇದೊಂದು ಹೊಸ ಬೆಳವಣಿಗೆ. ರೆಡ್ಡಿಯವರಂತೆ ಎಲ್ಲರೂ ತಾವು ಓದಿದ ಶಾಲೆಯ ಅಭಿವೃದ್ಧಿಗೆ ಮುಂದಾಗಬೇಕು. ತಮ್ಮಿಂದಾದ ನೆರವು ನೀಡಬೇಕು’ ಎಂದು ನಾಗೇಶ್‌ ಹೇಳಿದರು.

ADVERTISEMENT

ವಿ.ಎಸ್‌.ರೆಡ್ಡಿ, ‘ನಾನು ಓದಿದ ಶಾಲೆ ಇದು. ಇತ್ತೀಚೆಗೆ ಇಲ್ಲಿಗೆ ಭೇಟಿ ನೀಡಿದ್ದಾಗ ಕಟ್ಟಡವು ಶಿಥಿಲಗೊಂಡಿರುವುದನ್ನು ಕಂಡು ಬೇಸರವಾಗಿತ್ತು. ಇಂತಹ ಕಟ್ಟಡದಲ್ಲಿ ವಿದ್ಯಾರ್ಥಿಗಳು ಕಲಿಯುವುದು ಅಪಾಯಕಾರಿ ಎಂಬುದನ್ನು ಮನಗಂಡು ಸ್ಥಳೀಯರ ಜೊತೆಗೂಡಿ ಶಾಲೆಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆ’ ಎಂದರು.

‘ಮುಂದಿನ ದಿನಗಳಲ್ಲಿ ಶಾಲೆಯ ನಿರ್ವಹಣೆಗೆ ಅಗತ್ಯವಾಗಿರುವ ನೆರವು ನೀಡಲು ಸಿದ್ಧನಿದ್ದೇನೆ. ನಾನು ಅಕ್ಷರ ಕಲಿತ ಶಾಲೆಯಿಂದ ಇನ್ನಷ್ಟು ಮಂದಿ ಪ್ರತಿಭಾವಂತರು ಹೊರಬರಬೇಕು ಎಂಬ ಆಶಯ ಇದೆ. ಮಕ್ಕಳು ಈ ವ್ಯವಸ್ಥೆಯ ಪ್ರಯೋಜನ ಪಡೆದುಕೊಳ್ಳಬೇಕು. ಶಾಲೆಯಲ್ಲಿ ಕಂಪ್ಯೂಟರ್‌ ಪ್ರಯೋಗಾಲಯವಿದೆ. 12 ಕೊಠಡಿಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಖಾಸಗಿ ಶಾಲೆಗಳ ಮಾದರಿಯಲ್ಲೇ ಸ್ಮಾರ್ಟ್ ಕೊಠಡಿಗಳನ್ನು ನಿರ್ಮಿಸಲಾಗಿದೆ’ ಎಂದು ತಿಳಿಸಿದರು.

ಶಾಸಕಿ ಸೌಮ್ಯಾ ರೆಡ್ಡಿ, ಸ್ಥಳೀಯ ಮುಖಂಡ ಎಸ್.ಕೆ.ನಟರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗಪ್ಪ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಜೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪ್ರಕಾಶ್ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.