ADVERTISEMENT

ಜೈಲಿನಲ್ಲಿ ಶಶಿಕಲಾ ವಿಚಾರಣೆ

ಅಕ್ರಮ ಆಸ್ತಿಪಾಸ್ತಿ ಗಳಿಸಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 20:00 IST
Last Updated 13 ಡಿಸೆಂಬರ್ 2018, 20:00 IST
ವಿ.ಕೆ. ಶಶಿಕಲಾ
ವಿ.ಕೆ. ಶಶಿಕಲಾ   

ಬೆಂಗಳೂರು:ಇಲ್ಲಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಎಂಎಂಕೆ ನಾಯಕಿ ವಿ.ಕೆ. ಶಶಿಕಲಾ ಅವರನ್ನು ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳು ಗುರುವಾರ ಬೆಳಿಗ್ಗೆಯಿಂದ ವಿಚಾರಣೆಗೆ ಒಳಪಡಿಸಿದ್ದಾರೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಐದು ದಿನ ತಮಿಳುನಾಡು, ಪುದುಚೇರಿ, ಆಂಧ್ರ ಪ್ರದೇಶ ಹಾಗೂ ದೆಹಲಿಯಲ್ಲಿ ನಡೆದ ಐ.ಟಿ ದಾಳಿ ವೇಳೆ ವಶಪಡಿಸಿಕೊಳ್ಳಲಾದ ಆಸ್ತಿಪಾಸ್ತಿ ಹಾಗೂ ದಾಖಲೆಗಳ ಸಂಬಂಧ ಶಶಿಕಲಾ ಅವರನ್ನು ಪ್ರಶ್ನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬೆಳಿಗ್ಗೆ 10.55ರ ಸುಮಾರಿಗೆ ಜೈಲಿಗೆ ಆಗಮಿಸಿದ ವೀರರಾಘವನ್‌ ನೇತೃತ್ವದ ಏಳು ಅಧಿಕಾರಿಗಳ ತಂಡ ರಾತ್ರಿ 8 ರವರೆಗೂ ಶಶಿಕಲಾ ಅವರನ್ನು ಪ್ರಶ್ನಿಸಿತು. ಒಬ್ಬರ ಬಳಿಕ ಮತ್ತೊಬ್ಬರು ಪ್ರಶ್ನೆಗಳನ್ನು ಕೇಳಿದರು. ಅವರು ಕೊಟ್ಟ ಉತ್ತರಗಳನ್ನು ದಾಖಲಿಸಿಕೊಂಡರು. ಈ ವೇಳೆ ಕೆಲವು ದಾಖಲೆಗಳನ್ನು ತೋರಿಸಲಾಯಿತು. ಅಧಿಕಾರಿಗಳ ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಎಎಂಎಂಕೆ ನಾಯಕಿ ತಿಣುಕಾಡಿದರು. ಕೊಂಚ ಬಳಲಿದಂತೆ ಕಂಡುಬಂದರು ಎಂದು ಮೂಲಗಳು ವಿವರಿಸಿವೆ. ಐ.ಟಿ ಅಧಿಕಾರಿಗಳು ಜೈಲಿನೊಳಗೆ ವಿಚಾರಣೆ ನಡೆಸುತ್ತಿದ್ದರೆ, ಹೊರಗಡೆ ತಮ್ಮ ನಾಯಕಿಗೆ ಬೆಂಬಲ ಸೂಚಿಸಲು ಆ ಪಕ್ಷದ ಕೆಲವು ನಾಯಕರು ಕಾರ್ಯಕರ್ತರು ಸೇರಿದ್ದರು. ಸುಮಾರು 187 ಸ್ಥಳಗಳ ಮೇಲೆ ದಾಳಿ ನಡೆದಿತ್ತು. ಶಶಿಕಲಾ ಅವರಿಗೆ ಸೇರಿದ ಮನೆಗಳು ಮಾತ್ರವಲ್ಲ, ಅವರ ಆಪ್ತರ ಮನೆಗಳು, ಕಚೇರಿಗಳಲ್ಲೂ ಪರಿಶೀಲನೆ ನಡೆದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.