ADVERTISEMENT

ಶಶಿಕಲಾ ಜೈಲಿನಿಂದ ಬಿಡುಗಡೆ: ವಿಕ್ಟೋರಿಯಾ ಆಸ್ಪತ್ರೆ ಮುಂದೆ ಬೆಂಬಲಿಗರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 7:36 IST
Last Updated 27 ಜನವರಿ 2021, 7:36 IST
   

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಡಿ ಶಿಕ್ಷೆಗೆ ಗುರಿಯಾಗಿದ್ದ ಎಐಎಡಿಎಂಕೆ ಪಕ್ಷದ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ನಗರದ ಪರಪ್ಪನ ಅಗ್ರಹಾರ ಜೈಲಿನಿಂದ ಬುಧವಾರ ಅಧಿಕೃತವಾಗಿ ಬಿಡುಗಡೆಯಾಗಿದ್ದಾರೆ.

ಕೊರೊನಾ ಸೋಂಕು ತಗುಲಿರುವುದರಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಗೆ ಭೇಟಿ ನೀಡಿದ್ದ ಕಾರಾಗೃಹದ ಅಧಿಕಾರಿಗಳು, ಶಶಿಕಲಾ ಸಹಿ ಪಡೆದು ಬಿಡುಗಡೆಗೆ ಬೇಕಾದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದರಿಂದ ಅವರುಜೈಲಿಗೆ ತೆರಳಿ ಬಿಡುಗಡೆಯ ಪ್ರಕ್ರಿಯೆ ನಡೆಸುವ ಅಗತ್ಯವಿಲ್ಲ. ವಿಕ್ಟೋರಿಯಾ ಆಸ್ಪತ್ರೆಯಿಂದಲೇ ಅವರು ಬಿಡುಗಡೆಯಾಗಿ ತಮಿಳುನಾಡಿಗೆ ತರಳಲಿದ್ದಾರೆ. ಈಗ ಅವರ ಜೈಲುವಾಸ ಅಧಿಕೃತವಾಗಿ ಮುಗಿದಿದೆ.

₹ 66 ಕೋಟಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತೆ ವಿ.ಕೆ. ಶಶಿಕಲಾ ಫೆಬ್ರುವರಿ 2017 ರಿಂದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.

ADVERTISEMENT

ವಿ.ಕೆ.ಶಶಿಕಲಾ ನಟರಾಜನ್ ಅವರು ಇಂದು ಅಧಿಕೃತವಾಗಿ ಬಿಡುಗಡೆಯಾಗಿದ್ದಾರೆ. ಆದರೆ, ವಿಕ್ಟೋರಿಯ ಆಸ್ಪತ್ರೆಯ ಕೋವಿಡ್ ಕೇಂದ್ರದಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿದೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ವಿ.ಶೇಷಮೂರ್ತಿ ಸೇರಿದಂತೆ ಇಬ್ಬರು ಹಿರಿಯ ಅಧಿಕಾರಿಗಳ ತಂಡ ಶಶಿಕಲಾ ಅವರ ಬಿಡುಗಡೆಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಇಂದು ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ, ವೈದ್ಯರ ಸಮ್ಮುಖದಲ್ಲೇ ಬಿಡುಗಡೆ ಪತ್ರಕ್ಕೆ ಶಶಿಕಲಾ ಅವರಿಂದ ಸಹಿ ಪಡೆದಿದ್ದಾರೆ.

ಶಶಿಕಲಾ ಅವರ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಂಡಿರುವ ಕುರಿತು ಶೇಷಮೂರ್ತಿ ಅವರು ‘ಪ್ರಜಾವಾಣಿ’ಗೆ ಖಚಿತಪಡಿಸಿದರು.

‘ಬಿಡುಗಡೆ ಪತ್ರವನ್ನು ಹಸ್ತಾಂತರಿಸಿದ ಬಳಿಕ ಶಶಿಕಲಾ ಅವರು ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಧನ್ಯವಾದಗಳನ್ನು ತಿಳಿಸಿದರು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕೋವಿಡ್‌ ಇರುವುದರಿಂದ ಶಶಿಕಲಾ ಅವರಿಗೆ ಆಸ್ಪತ್ರೆಯಲ್ಲಿ ಇನ್ನೂ ಎರಡು ಅಥವಾ ಮೂರು ದಿನಗಳ ಕಾಲ ಚಿಕಿತ್ಸೆ ಮುಂದುವರಿಯಲಿದೆ.

ಬಿಡುಗಡೆ ವಿಚಾರ ತಿಳಿದು ಶಶಿಕಲಾ ಅವರ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ಎದುರು ಜಮಾಯಿಸಿದ್ದಾರೆ. ತಮಿಳುನಾಡಿನ ವಿವಿಧ ಭಾಗಗಳಿಂದ ಬೆಂಬಲಿಗರು ಬಂದಿದ್ದು, ಆಸ್ಪತ್ರೆ ಬಳಿ ಸಿಹಿ ಹಂಚುವ ಮೂಲಕ ಸಂಭ್ರಮದಲ್ಲಿ ತೊಡಗಿದ್ದಾರೆ.

ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಬಳಿಕ ಶಶಿಕಲಾ ಅವರನ್ನು ಹೊಸೂರಿನಿಂದ ತಮಿಳುನಾಡಿನ ಎಲ್ಲ ಜಿಲ್ಲೆಗಳಿಗೆ ಮೆರವಣಿಗೆಯ ಮೂಲಕ ಕರೆದೊಯ್ಯುವುದಾಗಿ ತಿಳಿಸಿದ್ದಾರೆ.

ಆಸ್ಪತ್ರೆಯ ಬಳಿ ಹೆಚ್ಚು ಜನ ಸೇರಿರುವುದರಿಂದ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಆಸ್ಪತ್ರೆ ಒಳಗೆ ಯಾರಿಗೂ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.