ADVERTISEMENT

ರೆಸಾರ್ಟ್‌ನಲ್ಲಿರುವ ಶಶಿಕಲಾ ತಮಿಳುನಾಡಿನತ್ತ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 20:24 IST
Last Updated 7 ಫೆಬ್ರುವರಿ 2021, 20:24 IST
   

ಬೆಂಗಳೂರು: ಕೊರೊನಾ ಸೋಂಕು ತಗುಲಿದ್ದರಿಂದಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿ ನಗರದ ದೇವನಹಳ್ಳಿ ಬಳಿ ಇರುವ ರೆಸಾರ್ಟ್‌ವೊಂದರಲ್ಲಿ ವಾಸ್ತವ್ಯ ಹೂಡಿರುವ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ, ಸೋಮವಾರ ತಮಿಳುನಾಡಿನತ್ತ ಪ್ರಯಾಣಿಸುವ ಸಾಧ್ಯತೆ ಇದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಶಶಿಕಲಾ, ಕೆಲ ದಿನಗಳ ಕಾಲ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ, ಅಲ್ಲಿಂದ ಬಿಡುಗಡೆಯಾಗಿ ವಿಶ್ರಾಂತಿ ಪಡೆಯಲು ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದಾರೆ.

ಇದೀಗ ಅವರು ವಾಪಸು ತಮಿಳುನಾಡಿಗೆ ಹೊರಡಲಿದ್ದು, ಕರ್ನಾಟಕ ಗಡಿಭಾಗದಿಂದಲೇ ಅವರನ್ನು ಬರಮಾಡಿಕೊಳ್ಳಲು ಪಕ್ಷದ ಕಾರ್ಯಕರ್ತರು ಸಜ್ಜಾಗಿದ್ದಾರೆ. ಹೊಸೂರು ರಸ್ತೆಯಲ್ಲಿ ಮೆರವಣಿಗೆ ನಡೆಸಲು ಅನುಮತಿಯನ್ನೂ ಕೋರಿದ್ದಾರೆ. ಆದರೆ, ಅನುಮತಿ ನೀಡಲು ಬೆಂಗಳೂರು ಕಮಿಷನರೇಟ್‌ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸರು ನಿರಾಕರಿಸಿದ್ದಾರೆ.

ADVERTISEMENT

‘ರೆಸಾರ್ಟ್‌ನಲ್ಲಿರುವ ಶಶಿಕಲಾ, ಸೋಮವಾರ ಬೆಳಿಗ್ಗೆ 7.30ಕ್ಕೆ ತಮಿಳುನಾಡಿನತ್ತ ಹೊರಡುವ ಸಾಧ್ಯತೆ ಇದೆ. ಈ ವೇಳೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಹೆಚ್ಚಿನ ಸಂಖ್ಯೆಯಲ್ಲಿ ರೆಸಾರ್ಟ್‌ ಎದುರು ಜಮಾಯಿಸುವ ಸಾಧ್ಯತೆ ಇದೆ. ಹೀಗಾಗಿ, ಕರ್ನಾಟಕ ಗಡಿಯವರೆಗೂ ಅವರಿಗೆ ಭದ್ರತೆ ನೀಡಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.