ADVERTISEMENT

ಕರಾವಳಿಯಲ್ಲಿ ಮತ್ತೆ ಸ್ಯಾಟ್‌ಲೈಟ್‌ ಫೋನ್ ಸದ್ದು

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 19:54 IST
Last Updated 6 ಜೂನ್ 2022, 19:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 3 ಕಡೆಗಳಲ್ಲಿ ನಿಷೇಧಿತ ಸ್ಯಾಟ್‌ಲೈಟ್‌ ಫೋನ್ ಸದ್ದು ಮಾಡಿರುವುದನ್ನು ಗುಪ್ತಚರ ಇಲಾಖೆ ಮೂಲಗಳು ದೃಢಪಡಿಸಿವೆ. ವರ್ಷದ ಅವಧಿಯಲ್ಲಿ ಕರಾವಳಿಯಲ್ಲಿ ಇದು ಮೂರನೇ ಬಾರಿ ಆಗಿದೆ.

ಮೇ 21ರಿಂದ 29ರ ನಡುವಿನ ಅವಧಿಯಲ್ಲಿ ಕರಾವಳಿಯಲ್ಲಿ ಈ ಫೋನ್ ಸಂಪರ್ಕ ಆಗಿವೆ ಎನ್ನಲಾಗಿದ್ದು, ರಾಜ್ಯ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಈ ಸಂಬಂಧ ತನಿಖೆ ಆರಂಭಿಸಿದೆ.

ಮಂಗಳೂರು ನಗರದ ಹೊರವಲಯದ ನಾಟೆಕಲ್, ಕುಳಾಯಿ ಹಾಗೂ ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಆವರಣದಲ್ಲಿ ಸ್ಯಾಟ್‌ ಲೈಟ್‌ ಫೋನ್ ಸಂಪರ್ಕ ಆಗಿರುವುದು ದೃಢವಾಗಿದೆ. ನಾಟೆಕಲ್‌ನಲ್ಲಿ ಈ ಸ್ಯಾಟ್‌ಲೈಟ್‌ ಫೋನ್ ರಿಂಗ್ ಆಗಿರುವ ಸ್ಥಳ ಖಾಸಗಿಯವರಿಗೆ ಸೇರಿದ್ದು, ಅಲ್ಲಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ADVERTISEMENT

ಸ್ಯಾಟ್‌ಲೈಟ್‌ ಫೋನ್ ಬಳಸಿದವರು ಯಾರು, ಅದರ ಮೂಲಕ ಯಾರನ್ನು ಸಂಪರ್ಕಿಸಲಾಗಿದೆ ಎಂಬುದನ್ನು ಖಚಿತವಾಗಿ ಪತ್ತೆ ಮಾಡಲು ಆಗದು. ಈ ಫೋನ್ ಬಳಕೆಯಾಗಿ ಒಂದು ದಿನದ ಬಳಿಕ ಗುಪ್ತಚರ ಪಡೆಗಳಿಗೆ ಸಂದೇಶ ಬರುತ್ತದೆ. ಹೀಗಾಗಿ ಈ ಫೋನ್‌ ಬಳಕೆಯನ್ನು ಭಾರತದಲ್ಲಿ 2012ರಲ್ಲೇ ನಿಷೇಧಿಸಲಾಗಿದೆ.

‘ಈ ಸಂಬಂಧ ಐಎಸ್‌ಡಿ ಯಾವುದೇ ವರದಿ ನೀಡಿಲ್ಲ. ವರದಿ ಬಂದಲ್ಲಿ ಈ ಬಗ್ಗೆ ಮುಂದಿನ ಕ್ರಮವಹಿಸಲಾಗುತ್ತದೆ’ ಎಂದು ಡಿಸಿಪಿ ಹರಿರಾಂ ಶಂಕರ್ ಪ್ರತಿಕ್ರಿಯಿಸಿದರು.

ಕೇಂದ್ರ ಗುಪ್ತಚರ ಸಂಸ್ಥೆಯೊಂದಿಗೆ ಜಂಟಿ ತನಿಖೆ: ಆರಗ
ಶಿವಮೊಗ್ಗ:
ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಅರಣ್ಯ ಪ್ರದೇಶಗಳಲ್ಲಿ ನಿಷೇಧಿತ ಸ್ಯಾಟ್‌ಲೈಟ್‌ ಫೋನ್‌ ಸಿಗ್ನಲ್‌ಗಳು ಅಕ್ರಮವಾಗಿ ಕಾರ್ಯಾಚರಣೆ ನಡೆಸಿರುವ ಬಗ್ಗೆ ಕೇಂದ್ರ ಗುಪ್ತಚರ ಸಂಸ್ಥೆಯೊಂದಿಗೆ (ಐಬಿ) ರಾಜ್ಯದ ಪೊಲೀಸರು ಜಂಟಿಯಾಗಿ ತನಿಖೆ ಕೈಗೊಂಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ತೀರ್ಥಹಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಬಗ್ಗೆ ರಾಜ್ಯದ ಪೊಲೀಸರೂ ಕೇಂದ್ರದ ಗುಪ್ತಚರ ಸಂಸ್ಥೆಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.