
ಸತೀಶ ಜಾರಕಿಹೊಳಿ
ನವದೆಹಲಿ: ‘ಉಚಿತ ಕೊಡುಗೆಗಳನ್ನು ಕರ್ನಾಟಕದಲ್ಲಿ ಮಾತ್ರ ನೀಡುತ್ತಿಲ್ಲ. ಈ ಯೋಜನೆಗಳನ್ನು ಮರು ಪರಿಶೀಲಿಸುವ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ಸಲಹೆ ಬಗ್ಗೆ ಎಲ್ಲರೂ ಸೇರಿ ನಿರ್ಧಾರ ತೆಗೆದುಕೊಳ್ಳಬೇಕು. ಮುಖ್ಯಮಂತ್ರಿಗಳ ಜತೆಗೂ ಚರ್ಚೆ ನಡೆಸಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಇದೆ ಎಂದು ಹೇಳಿದ್ದೇನೆ. ಸರ್ಕಾರ ಬದಲಾದರೂ ಭ್ರಷ್ಟಾಚಾರ ಹಾಗೆಯೇ ಇರುತ್ತದೆ. ಗುತ್ತಿಗೆದಾರರ ವಿಚಾರಕ್ಕೆ ಆ ಹೇಳಿಕೆ ನೀಡಿದ್ದೆ. ಯಾವುದೇ ನಿರ್ದಿಷ್ಟ ವಿಚಾರಕ್ಕೆ ಈ ಹೇಳಿಕೆ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಸುಪ್ರೀಂ ಕೋರ್ಟ್ ಮತ್ತು ದೆಹಲಿ ಹೈಕೋರ್ಟ್‌ನಲ್ಲಿ ವಕೀಲರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿರುವ ಬಗ್ಗೆ ಅಧ್ಯಯನ ಮಾಡಲು ನಿಯೋಗ ಬಂದಿದ್ದೇವೆ. ಇಲ್ಲಿನ ವ್ಯವಸ್ಥೆ ಪರಿಶೀಲಿಸಿ, ವಕೀಲರ ಸಲಹೆ ಪಡೆದು ರಾಜ್ಯದಲ್ಲಿ ವಕೀಲರಿಗೆ ವ್ಯವಸ್ಥೆ ಮಾಡಲಾಗುವುದು. ಎಲ್ಲ ಕಡೆಗೂ ಮಾದರಿಯಾಗುವಂತೆ ಚೇಂಬರ್ ವ್ಯವಸ್ಥೆ ಮಾಡಲಾಗುವುದು’ ಎಂದರು.
‘ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದಿಲ್ಲ. ಇಲಾಖಾ ಕೆಲಸದ ಸಂಬಂಧ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.