ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯ: ಐದನೇ ದಿನವೂ ಮುಂದುವರಿದ ಅಭಿಯಾನ

ಹಂಪಿ ಕನ್ನಡ ವಿ.ವಿ ಉಳಿಸುವಂತೆ ಸಾಹಿತಿಗಳು, ಸಂಶೋಧಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 19:31 IST
Last Updated 27 ಡಿಸೆಂಬರ್ 2020, 19:31 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಬೆಂಗಳೂರು: ಅನುದಾನದ ಕೊರತೆಯೂ ಸೇರಿದಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಸುತ್ತಿರುವ ‘ಕನ್ನಡ ವಿ.ವಿ ಉಳಿಸಿ’ ಅಭಿಯಾನ ಐದನೇ ದಿನವಾದ ಭಾನುವಾರವೂ ಮುಂದುವರೆಯಿತು.

ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ, ಲೇಖಕರಾದ ಡಾ.ಕೆ. ಮರುಳಸಿದ್ದಪ್ಪ, ಬೊಳುವಾರು ಮೊಹಮ್ಮದ್ ಕುಂಞಿ, ಸಂಶೋಧಕ ಹಂ.ಪ. ನಾಗರಾಜಯ್ಯ, ಚಿಂತಕ ಪ್ರೊ.ಮುಜಾಫರ್‌ ಆಸಾದಿ ಸೇರಿದಂತೆ ಹಲವರು ಟ್ವಿಟರ್‌, ಫೇಸ್‌ ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸ್‌ ಆ್ಯಪ್‌ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಭಿತ್ತಿಪತ್ರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಯಾನಕ್ಕೆ ಬೆಂಬಲ ಸೂಚಿಸಿದರು.

‘ಹಂಪಿ ಕನ್ನಡ ವಿಶ್ವವಿದ್ಯಾಲಯ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿದೆ ಎಂಬುದು ನಾಚಿಕೆಗೇಡಿನ ವಿಚಾರ. ಸರ್ಕಾರವು ಹಂಪಿ ವಿಶ್ವವಿದ್ಯಾಲಯವನ್ನು ವಿಶೇಷವಾಗಿ ಪರಿಗಣಿಸಿ ಬೆಳೆಸಬೇಕು’ ಎಂದು ಗೊ.ರು. ಚನ್ನಬಸಪ್ಪ ಒತ್ತಾಯಿಸಿದ್ದಾರೆ.

ADVERTISEMENT

‘ಕನ್ನಡ ವಿಶ್ವವಿದ್ಯಾಲಯ ಕರ್ನಾಟಕದ ಅಸ್ಮಿತೆಯ ಸಂಕೇತ. ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಇಲ್ಲದ ಅನುದಾನದ ಕೊರತೆ ಕನ್ನಡ ವಿಶ್ವವಿದ್ಯಾಲಯಕ್ಕೆ ಎದುರಾಗಿದೆ ಎಂದರೆ ನಾವು ನಾಚಿ ತಲೆ ತಗ್ಗಿಸಬೇಕು. ಕನ್ನಡಪರ ಶಕ್ತಿಗಳೆಲ್ಲ ಒಟ್ಟಾಗಿ ಈ ಅಪಮಾನಕ್ಕೆ ಕಾರಣವಾದವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಕೆ. ಮರುಳಸಿದ್ದಪ್ಪ ಹೇಳಿದ್ದಾರೆ.

‘ಇದು ಆರೋಗ್ಯಕರ ಬೆಳವಣಿಗೆಯಲ್ಲ. ಕನ್ನಡ ವಿಶ್ವವಿದ್ಯಾಲಯದ ಸಮಸ್ಯೆಯನ್ನು ಇಷ್ಟು ಬೆಳೆಯಲು ಸರ್ಕಾರ ಬಿಟ್ಟಿರುವುದು ಶೈಕ್ಷಣಿಕ ದುರಂತ. ಪರಿಹಾರ ವಿಳಂಬ ಆದಷ್ಟೂ ಅಪಾಯಕಾರಿ’ ಎಂದು ಹಂ.ಪ. ನಾಗರಾಜಯ್ಯ ಪ್ರತಿಕ್ರಿಯಿಸಿದ್ದಾರೆ.

ಸಾಹಿತಿ ಪ್ರೊ. ಕಾಳೇಗೌಡ ನಾಗವಾರ, ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ಬರಹಗಾರ ಡಾ.ಜೆ.ಎಸ್‌. ಪಾಟೀಲ, ಕವಿ ಕೆ.ಎಸ್‌. ರವಿಕುಮಾರ್‌, ಸಾಮಾಜಿಕ ಕಾರ್ಯಕರ್ತ ಡಾ.ಎಚ್‌.ವಿ. ವಾಸು ತಮ್ಮ ಅಭಿಪ್ರಾಯಗಳುಳ್ಳ ಭಿತ್ತಿಪತ್ರಗಳನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.