ADVERTISEMENT

Internal Reservation | ಒಳ ಮೀಸಲಾತಿ ವರದಿ ಜಾರಿ: ಪರ– ವಿರೋಧದ ಕೂಗು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 23:30 IST
Last Updated 12 ಆಗಸ್ಟ್ 2025, 23:30 IST
<div class="paragraphs"><p>ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಎಚ್.ಎನ್. ನಾಗಮೋಹನ್‌ ದಾಸ್ ಆಯೋಗದ ವರದಿಯ ಅನುಷ್ಠಾನದ ಕುರಿತ ಕಾರ್ಯಾಗಾರದಲ್ಲಿ ಬಿ. ವೈ.ವಿಜಯೇಂದ್ರ, ದುರ್ಯೋಧನ ಐಹೊಳೆ,<br>ಎ. ನಾರಾಯಣಸ್ವಾಮಿ, ಗೋವಿಂದ ಕಾರಜೋಳ, ಬಸವರಾಜ ಮತ್ತಿಮಡು, ಎಸ್.ಆರ್. ವಿಶ್ವನಾಥ, ಹನುಮಂತಪ್ಪ ಅವರು ಕೈ ಎತ್ತಿ ಒಗ್ಗಟ್ಟು ಪ್ರದರ್ಶಿಸಿದರು</p></div>

ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಎಚ್.ಎನ್. ನಾಗಮೋಹನ್‌ ದಾಸ್ ಆಯೋಗದ ವರದಿಯ ಅನುಷ್ಠಾನದ ಕುರಿತ ಕಾರ್ಯಾಗಾರದಲ್ಲಿ ಬಿ. ವೈ.ವಿಜಯೇಂದ್ರ, ದುರ್ಯೋಧನ ಐಹೊಳೆ,
ಎ. ನಾರಾಯಣಸ್ವಾಮಿ, ಗೋವಿಂದ ಕಾರಜೋಳ, ಬಸವರಾಜ ಮತ್ತಿಮಡು, ಎಸ್.ಆರ್. ವಿಶ್ವನಾಥ, ಹನುಮಂತಪ್ಪ ಅವರು ಕೈ ಎತ್ತಿ ಒಗ್ಗಟ್ಟು ಪ್ರದರ್ಶಿಸಿದರು

   

 ಪ್ರಜಾವಾಣಿ ಚಿತ್ರ

ಬೆಂಗಳೂರು: ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ನೀಡುವ ಸಂಬಂಧ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್‌ ಆಯೋಗದ ವರದಿ ಜಾರಿ ಕುರಿತು ಪರ–ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ನಗರದಲ್ಲಿ ಮಂಗಳವಾರ ವಿವಿಧ ಸಂಘಟನೆಗಳು ಈ ಸಂಬಂಧ ಪ್ರತ್ಯೇಕವಾಗಿ ಸಭೆ ನಡೆಸಿವೆ. ವರದಿ ಜಾರಿ ಮಾಡಬೇಕೆಂದು ಕರ್ನಾಟಕ ಮಾದಿಗ ಮತ್ತು ಉಪ ಜಾತಿಗಳ ಒಳ ಮೀಸಲಾತಿ ಒಕ್ಕೂಟ ಆಗ್ರಹಿಸಿದರೆ, ಮೀಸಲಾತಿ ಸಂರಕ್ಷಣಾ ಒಕ್ಕೂಟ–ಕರ್ನಾಟಕ ವಿರೋಧಿಸಿದೆ. ವರದಿ ಜಾರಿಗೊಳಿಸಬೇಕು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ ಆಗ್ರಹಿಸಿದೆ.

ADVERTISEMENT

18ರಿಂದ ಅಸಹಕಾರ ಚಳವಳಿ

ಇದೇ 16ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ನೀಡುವ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್ ನೇತೃತ್ವದ ಆಯೋಗದ ವರದಿಯನ್ನು ಅಂಗೀಕರಿ ಸದಿದ್ದರೆ, 17ರಂದು ಜಿಲ್ಲಾ ಕೇಂದ್ರದಲ್ಲಿ ಸಭೆ ನಡೆಸಿ, 18ರಿಂದ ಅಸಹಕಾರ ಚಳವಳಿ ನಡೆಸಲು ಕರ್ನಾಟಕ ಮಾದಿಗ ಮತ್ತು ಉಪ ಜಾತಿಗಳ ಒಳ ಮೀಸಲಾತಿ ಒಕ್ಕೂಟ ನಿರ್ಧರಿಸಿದೆ.

ಸಂಸದ ಗೋವಿಂದ ಕಾರಜೋಳ ಮಾತನಾಡಿ, ‘ನಾವು ಯಾವುದೇ ಸಮುದಾಯದ ವಿರುದ್ಧ ಹೋರಾಟ ಮಾಡುತ್ತಿಲ್ಲ. ಮಾದಿಗ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು. ನಾಗಮೋಹನ್ ದಾಸ್ ವರದಿಯನ್ನಾದರೂ ಜಾರಿ ಮಾಡಲಿ ಅಥವಾ ಮಾಧುಸ್ವಾಮಿ ವರದಿಯನ್ನಾದರೂ ಅನುಷ್ಠಾನಕ್ಕೆ ತರಲಿ’ ಎಂದರು. 

ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ‘ಕೇವಲ ಮೀಸಲಾತಿ ನೀಡುವುದಲ್ಲ. ವಿಶೇಷವಾದ ಯೋಜನೆಗಳನ್ನು ಘೋಷಿಸಬೇಕು. ಸಿಇಟಿಯಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಮಾದಿಗರು ಉತ್ತೀರ್ಣರಾಗಿದ್ದಾರೆ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಇತರೆ ಸಮುದಾಯದವರ ದಾಖಲಾತಿ ಪ್ರಮಾಣವು 2,500 ಇದ್ದರೆ, ನಾವು ಕೇವಲ 600 ಜನರು ದಾಖಲಾಗಿದ್ದೇವೆ. ಇದು ಶೈಕ್ಷಣಿಕ ಸ್ಥಿತಿಗತಿಯನ್ನು ತೋರಿಸುತ್ತದೆ’ ಎಂದು ವಿವರಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಾರ್ಯಾಗಾರ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿದರು.  ಸಂಸದ ರಮೇಶ್ ಜಿಗಜಿಣಗಿ, ಶಾಸಕರಾದ ಬಸವರಾಜ ಮತ್ತಿಮಡು, ದುರ್ಯೋಧನ ಐಹೊಳೆ, ವಕ್ತಾರ ಎಚ್. ವೆಂಕಟೇಶ್ ದೊಡ್ಡೇರಿ, ಎಸ್.ಸಿ ಮೋರ್ಚಾ ಉಪಾಧ್ಯಕ್ಷ ಹೂಡಿ ಮಂಜುನಾಥ್, ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್, ಮುಖಂಡ ಅಂಬಣ್ಣ, ಶಂಕರಪ್ಪ ಭಾಗವಹಿಸಿದ್ದರು.

ಹೋರಾಟದ ಎಚ್ಚರಿಕೆ

ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಏಕಪಕ್ಷೀಯವಾಗಿ ಅನುಮೋದಿಸಿದರೆ, ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಒಳ ಮೀಸಲಾತಿ ಕುರಿತ ರಾಜ್ಯ ಮಟ್ಟದ ಚಿಂತನಾ ಸಭೆಯಲ್ಲಿ ಎಚ್ಚರಿಕೆ ನೀಡಲಾಯಿತು.  

ಮೀಸಲಾತಿ ಸಂರಕ್ಷಣಾ ಒಕ್ಕೂಟ–ಕರ್ನಾಟಕ ಆಯೋಜಿಸಿದ್ದ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್‌ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರಕಾಶ್ ರಾಥೋಡ್, ಭೀಮ ಆರ್ಮಿಯ ರಾಜ ಗೋಪಾಲ್, ಆದರ್ಶ ಯಲ್ಲಪ್ಪ, ಅನಂತ್ ನಾಯಕ್ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಒಮ್ಮತದ ನಿರ್ಣಯಗಳನ್ನು ಕೈಗೊಂಡರು.

‘ಸೋರಿಕೆಯಾಗಿರುವ ವರದಿಯ ಅಂಶಗಳು ಅಪೂರ್ಣ, ಅವೈಜ್ಞಾನಿಕ, ಅಸ್ಪಷ್ಟ ಮತ್ತು ನ್ಯಾಯ ಸಮ್ಮತವಲ್ಲದ ಶಿಫಾರಸ್ಸು ಗಳನ್ನು ಒಳಗೊಂಡಿವೆ. ಕಳೆದ 50 ವರ್ಷಗಳಿಂದ 101 ಸಮುದಾಯಗಳ ಸ್ಥಿತಿಗತಿಗಳ ಮಾಹಿತಿ, ಸಮೀಕ್ಷೆಯ ಸಮಗ್ರ ದತ್ತಾಂಶಗಳನ್ನು ಬಿಡುಗಡೆಗೊಳಿಸಬೇಕು. ಪರಿಶಿಷ್ಠ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳಿಂದ ಆಕ್ಷೇಪಣೆ ಸ್ವೀಕರಿಸಲು ಮೂರು ತಿಂಗಳ ಕಾಲಾವಕಾಶ ನೀಡಬೇಕು’ ಎಂದು ಒತ್ತಾಯಿಸಲಾಯಿತು.

‘ವರದಿಯಲ್ಲಿ ಹೊಲಯ, ಛಲವಾದಿ, ಬಂಜಾರ, ಭೋವಿ, ಕೊರಮ, ಕೊರಚ, ಚರ್ಮಕಾರ, ಸಮಗಾರ, ಚಮ್ಮಾರ ಮತ್ತಿತರ ಸಮುದಾಯಗಳಿಗೆ ಅನ್ಯಾಯ ಆಗಿರುವುದು ಕಂಡು ಬಂದಿದೆ. ಸರ್ಕಾರ ಹೊಸ ಆಯೋಗ ಅಥವಾ ಸದನ ಸಮಿತಿ ರಚಿಸಿ, ಇದನ್ನು ಸರಿಪಡಿಸಬೇಕು’ ಎಂದು ಪರಿಶಿಷ್ಟ ಜಾತಿ ಸಮುದಾಯಗಳ ಜಂಟಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಎಲ್ಲ ಶಾಸಕರಿಗೆ ಹಕ್ಕೊತ್ತಾಯ ಸಲ್ಲಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

‘ಬಲಗೈ ಸಮುದಾಯಕ್ಕೆ ಅನ್ಯಾಯ’

ಬೆಂಗಳೂರು: ನಾಗಮೋಹನದಾಸ್ ಆಯೋಗದ ವರದಿಯು ನ್ಯೂನ್ಯತೆಗಳಿಂದ ಕೂಡಿದ್ದು, ಅವುಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಒಳ ಮೀಸಲಾತಿ ಹಂಚಿಕೆ ಮಾಡುವ ಸಂದರ್ಭದಲ್ಲಿ ಬಲಗೈ ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದು ಜೈಭೀಮ ಸಾಮಾಜಿಕ ಪರಿವರ್ತನಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ದಾಸಯ್ಯ ಆರೋಪಿಸಿದರು. 

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾಗಮೋಹನದಾಸ್‌ ವರದಿಯಲ್ಲಿ ಒಳ ಮೀಸಲಾತಿ ಹಂಚಿಕೆ ಮಾಡುವ ಪ್ರಸ್ತಾವದಲ್ಲಿ ಬಲಗೈ ಸಮುದಾಯವನ್ನು ಬೇರೆ–ಬೇರೆ ವರ್ಗಗಳಲ್ಲಿ ಸೇರಿಸಲಾಗಿದೆ. ಇದರಿಂದ ನಮ್ಮ ಸಮುದಾಯಕ್ಕೆ ಅನ್ಯಾಯ ಆಗುವ ಸಾಧ್ಯತೆ ಇದ್ದು, ಇದನ್ನು ಸರಿಪಡಿಸುವ ಕೆಲಸವಾಗಬೇಕು’ ಎಂದು ಆಗ್ರಹಿಸಿದರು.

‘ಎರಡು ಅಥವಾ ಹೆಚ್ಚಿನ ಜಾತಿಗಳ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಹೋಲಿಸಿದಾಗ ಸಾಮ್ಯತೆ ಕಂಡು ಬಂದಲ್ಲಿ ಅವುಗಳನ್ನು ಒಟ್ಟಾರೆ ಗುಂಪುಗಳನ್ನಾಗಿ ಸೇರಿಸಬೇಕು. ಆದರೆ ಇದನ್ನು ಮನಸೋ ಇಚ್ಛೆ ಉಲ್ಲಂಘನೆ ಮಾಡಿ, ಬಲಗೈ ಸಮುದಾಯವನ್ನು ಪ್ರವರ್ಗ–ಎ, ಪ್ರವರ್ಗ–ಬಿ ಪ್ರವರ್ಗ–ಸಿ ಹಾಗೂ ಪ್ರವರ್ಗ–ಇ ಗುಂಪಿನಲ್ಲಿ ಸೇರಿಸಲಾಗಿದೆ’ ಎಂದು ದೂರಿದರು.   

15ರಂದು ಜಿಲ್ಲಾ ಉಸ್ತುವಾರಿಗಳಿಗೆ ಘೇರಾವ್‌

ವರದಿ ಜಾರಿಗೆ ಆಗ್ರಹಿಸಿ, ನಗರದ ಸ್ವಾತಂತ್ರ್ಯ ಉದ್ಯಾನ ದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಮುಂದುವರಿದಿದೆ.  

ಆಗಸ್ಟ್‌ 16ರಂದು ವಿಶೇಷ ಸಚಿವ ಸಂಪುಟ ಕರೆದು ವರದಿ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳು ವುದಾಗಿ ರಾಜ್ಯ ಸರ್ಕಾರ ಹೇಳಿದೆ. ಅದರ ಭಾಗವಾಗಿ ಸ್ವಾತಂತ್ರ್ಯ ದಿನಾಚರಣೆಯಂದು ಜಿಲ್ಲಾ ಕೇಂದ್ರಗಳಲ್ಲಿ ಉಸ್ತುವಾರಿ ಸಚಿವರಿಗೆ ಘೇರಾವ್‌ ಹಾಕಿ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ಪತ್ರಿಭಟನ ಸ್ಥಳದಲ್ಲಿದ್ದ ಮುಖಂಡರು ಮಂಗಳವಾರ ಘೋಷಿಸಿದರು. ಒಕ್ಕೂಟದ ಪ್ರಧಾನ ಸಂಚಾಲಕ ಬಸವರಾಜ ಕೌತಾಳ್‌, ಮುಖಂಡರಾದ ಅಂಬಣ್ಣ ಅರೋಲಿಕರ್, ಕರಿಯಪ್ಪ ಗುಡಿಮನಿ, ಸಣ್ಣ ಮಾರೆಪ್ಪ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.