ADVERTISEMENT

ವೈದ್ಯಕೀಯ ಪ್ರವೇಶ ನಿಯಮ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ನಕಾರ

ವೈದ್ಯಕೀಯ, ದಂತ ವೈದ್ಯಕೀಯ ಪಿ.ಜಿ. ಪ್ರವೇಶ:

​ಪ್ರಜಾವಾಣಿ ವಾರ್ತೆ
Published 27 ಜುಲೈ 2019, 19:55 IST
Last Updated 27 ಜುಲೈ 2019, 19:55 IST
.
.   

ನವದೆಹಲಿ: ‘ರಾಜ್ಯದ ಖಾಸಗಿ ವೈದ್ಯಕೀಯ ಕಾಲೇಜುಗಳ ಶೇ 50ರಷ್ಟು ಸಾಂಸ್ಥಿಕ ಸೀಟುಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗೆ ಪ್ರವೇಶ ಪಡೆಯಲು ಕರ್ನಾಟಕದಲ್ಲೇ ಕನಿಷ್ಠ 10 ವರ್ಷ ಅಧ್ಯಯನ ಮಾಡಿರುವುದು ಕಡ್ಡಾಯ’ ಎಂಬ ರಾಜ್ಯ ಸರ್ಕಾರದ ನಿಯಮವನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

‘ಈಗಾಗಲೇ ಪ್ರವೇಶ ಪ್ರಕ್ರಿಯೆ ಮುಗಿದಿರುವುದರಿಂದ ಈ ಅರ್ಜಿ ಕುರಿತು ಯಾವುದೇ ಆದೇಶ ನೀಡುವುದು ಸಾಧ್ಯವಿಲ್ಲ’ ಎಂದು
ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ ಹಾಗೂ ಎಂ.ಆರ್‌. ಶಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ಕರ್ನಾಟಕದ ವಿವಿಧ ಕಾಲೇಜು ಗಳಿಂದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಪಡೆದಿರುವ ಅಭ್ಯರ್ಥಿಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳೆದ ಮಾರ್ಚ್‌ನಲ್ಲಿ ರೂಪಿಸಿದ್ದ ನಿಯಮಗಳ ಸಿಂಧುತ್ವ ಪ್ರಶ್ನಿಸಿ ಈ ಮೇಲ್ಮನವಿ ಸಲ್ಲಿಸಿದ್ದರು.

ADVERTISEMENT

ಅಭ್ಯರ್ಥಿಗಳು ಸ್ಥಳೀಯವಾಗಿ 10ರಿಂದ 12ನೇ ತರಗತಿಯಲ್ಲಿ ಕನಿಷ್ಠ 10 ವರ್ಷ ಅಧ್ಯಯನ ಮಾಡಿರಬೇಕು ಎಂಬ ಷರತ್ತುಗಳನ್ನು ಒಳಗೊಂಡ ನಿಯಮಗಳನ್ನು ರೂಪಿಸಿರುವುದು, ಸಮಾನತೆಯ ಹಕ್ಕಿನ ಉಲ್ಲಂಘನೆ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶಕ್ಕೆ ತದ್ವಿರುದ್ಧವಾಗಿದೆ ಎಂದು ಅರ್ಜಿದಾರರು ದೂರಿದ್ದರು.

2019ರ ಎನ್‌ಇಇಟಿ (ನೀಟ್)ಯಲ್ಲಿ ಉತ್ತೀರ್ಣರಾಗಿರುವ ಅರ್ಜಿದಾರರಲ್ಲಿ ಕೆಲವರು ಹೊರ ರಾಜ್ಯದವರಾಗಿದ್ದು, ಅಖಿಲ ಭಾರತ ಮಟ್ಟದಲ್ಲಿ ಶೇ 15ರಷ್ಟು ಮೀಸಲಿದ್ದ ಸೀಟುಗಳಲ್ಲಿ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದು ಪದವಿ
ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.