ADVERTISEMENT

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಸುಪ್ರೀಂ ಕೋರ್ಟ್‌ ತಡೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 15:55 IST
Last Updated 5 ಜನವರಿ 2024, 15:55 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಕರ್ನಾಟಕದಲ್ಲಿ 13,352 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಹೈಕೋರ್ಟ್ ವಿಭಾಗೀಯ ಪೀಠ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ. 

ಹೈಕೋರ್ಟ್ ಆದೇಶ ಪ್ರಶ್ನಿಸಿ ಚಿಕ್ಕಬಳ್ಳಾಪುರದ ಜಿ.ವಿ.ನರೇಂದ್ರಬಾಬು ಹಾಗೂ ಇತರರು ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಹಸಾನುದ್ದೀನ್‌ ಅಮಾನುಲ್ಲಾ ಅವರ ಪೀಠವು ಈ ಆದೇಶ ನೀಡಿದೆ. 

ADVERTISEMENT

ವಾದ ಆಲಿಸದೆ ಮಧ್ಯಂತರ ಆದೇಶ ಹೊರಡಿಸಬಾರದು ಎಂದು ಕರ್ನಾಟಕ ಸರ್ಕಾರ ಕೇವಿಯೆಟ್‌ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿರುವ ಪೀಠವು, ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ. ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ಆದೇಶದ 45ರಿಂದ 47ರ ವರೆಗಿನ ಪ್ಯಾರಾಗಳನ್ನು ಜಾರಿಗೊಳಿಸಬಾರದು ಎಂದು ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿದೆ. 2023ರಲ್ಲಿ ಪ್ರಕಟಿಸಿರುವ ಆಯ್ಕೆಪಟ್ಟಿ ಪ್ರಕಾರ, ಅಭ್ಯರ್ಥಿಗಳಿಗೆ ಆಯ್ಕೆಪಟ್ಟಿ ವಿತರಿಸುತ್ತಿದ್ದರೆ ಅದನ್ನು ಅಮಾನತಿನಲ್ಲಿಡಬೇಕು ಎಂದೂ ಸೂಚಿಸಿದೆ. 

ರಾಜ್ಯ ಸರ್ಕಾರವು ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸುವಾಗ ವಿವಾಹಿತ ಮಹಿಳೆಯ ಪತಿಯ ಆದಾಯ ಪ್ರಮಾಣಪತ್ರವನ್ನು ಪರಿಗಣಿಸಿತ್ತು. ‘ಮದುವೆಯಾದ ಮಹಿಳೆಯರು ಪತಿಯ ಆದಾಯ ಪ್ರಮಾಣಪತ್ರವನ್ನೇ ಸಲ್ಲಿಸಬೇಕು ಎನ್ನುವ ಕುರಿತು ನೇಮಕಾತಿ ಅಧಿಸೂಚನೆಯಲ್ಲಿ ಸ್ಪಷ್ಟ ನಿರ್ದೇಶನ ಇರಲಿಲ್ಲ. ಮೆರಿಟ್‌ ಇದ್ದರೂ ನಮ್ಮನ್ನು ನೇಮಕಾತಿ ಪಟ್ಟಿಯಿಂದ ಕೈಬಿಡಲಾಗಿದೆ’ ಎಂದು ಆರೋಪಿಸಿ ಅವಕಾಶವಂಚಿತರು ಹೈಕೋರ್ಟ್‌ನ ಮೆಟ್ಟಿಲೇರಿದ್ದರು. 

ಹೈಕೋರ್ಟ್‌ನ ಏಕಸದಸ್ಯ ಪೀಠವು ‘ವಿವಾಹಿತ ಮಹಿಳೆಯ ತಂದೆಯ ಆದಾಯ ಪ್ರಮಾಣಪತ್ರವನ್ನೂ ಪರಿಗಣಿಸಬೇಕು’ ಎಂದು ಆದೇಶಿಸಿ, ತಾತ್ಕಾಲಿಕ ಆಯ್ಕೆಪಟ್ಟಿಯನ್ನು ರದ್ದುಗೊಳಿಸಿತ್ತು. ಕೋರ್ಟ್‌ ಆದೇಶದಂತೆ ಆಯ್ಕೆಪಟ್ಟಿಯನ್ನು ಪರಿಷ್ಕರಿಸಿದ ಸರ್ಕಾರ, ಹೊಸ ಪಟ್ಟಿ ಪ್ರಕಟಿಸಿದಾಗ ಮೊದಲಿದ್ದ ಪಟ್ಟಿಯಿಂದ 451 ಅಭ್ಯರ್ಥಿಗಳು ಹೊರಗುಳಿದರು. ಪ್ರಕರಣ ಮತ್ತೆ ಕೋರ್ಟ್‌ ಮೆಟ್ಟಿಲೇರಿತ್ತು.

2023ರ ಅಕ್ಟೋಬರ್‌ 13ರಂದು ಏಕಸದಸ್ಯ ಪೀಠದ ಆದೇಶವನ್ನು ರದ್ದುಪಡಿಸಿದ್ದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ನೇತೃತ್ವದ ದ್ವಿಸದಸ್ಯ ಪೀಠ, ‘ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೊರಗಿಡಲಾಗಿರುವ ಅಭ್ಯರ್ಥಿಗಳು ತಮ್ಮ ತಕರಾರನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಮುಂದೆ ಮಂಡಿಸಿ ಸೂಕ್ತ ನ್ಯಾಯ ಪಡೆಯಬಹುದು’ ಎಂದೂ ಸ್ಪಷ್ಟಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.