ಬಾಗಲಕೋಟೆ: ‘ಪರಿಶಿಷ್ಟ ಜಾತಿ ಜನಸಂಖ್ಯೆ ರಾಜ್ಯದಲ್ಲಿ ಶೇ18ರಷ್ಟಿದ್ದು, ಮೀಸಲಾತಿ ಪ್ರಮಾಣವನ್ನೂ ಶೇ 18ಕ್ಕೆ ಹೆಚ್ಚಿಸಬೇಕು’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಒತ್ತಾಯಿಸಿದರು.
‘ಭೋವಿ, ಬಂಜಾರ, ಕೊರಮ, ಕೊರಚ ಜಾತಿಯವರು ಶೇ 5 ರಷ್ಟು ಮತ್ತು ಅಲೆಮಾರಿಗಳು ಶೇ 1ರಷ್ಟು ಇದ್ದಾರೆ. ಆದ್ದರಿಂದ ಮೀಸಲಾತಿ ಹೆಚ್ಚಿಸಿ, ಎಲ್ಲ ಗುಂಪುಗಳಿಗೆ ಸಮನಾದ ಒಳಮೀಸಲಾತಿ ನೀಡಬೇಕು’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
‘2011ರ ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಕಡಿಮೆ ತೋರಿಸಲಾಗಿದೆ. ರಾಜ್ಯದಲ್ಲಿ ಶೇ 22ರಷ್ಟು ಜನಸಂಖ್ಯೆ ಹೆಚ್ಚಳವಾಗಿದ್ದು, ಪರಿಶಿಷ್ಟ ಜಾತಿ ಜನಸಂಖ್ಯೆ 1.22 ಕೋಟಿಯಿಂದ 1.35 ಕೋಟಿಯೊಳಗೆ ಇರಬೇಕಿತ್ತು. ಅಲೆಮಾರಿ, ಅರೆ ಅಲೆಮಾರಿಗಳನ್ನು ಕಡೆಗಣಿಸಲಾಗಿದೆ’ ಎಂದರು.
‘ಎಡಗೈ, ಬಲಗೈ ಸಂಘರ್ಷದಲ್ಲಿ ಧ್ವನಿ ಇಲ್ಲದ ಸಮಾಜಗಳಿಗೆ ಅನ್ಯಾಯವಾಗಿದೆ. ಸಮೀಕ್ಷೆಯಲ್ಲಿ ಅತ್ಯಂತ ಹಿಂದುಳಿದ ಎಂದು ಗುರುತಿಸಲಾದ ‘ಸಿ’ ಗುಂಪಿಗೆ ರೋಸ್ಟರ್ ಪದ್ಧತಿಯಲ್ಲಿ ಬಿಂದು ‘1’ ನೀಡಬೇಕು ಎಂದರು.
ವಿಮುಕ್ತ ಸಮುದಾಯ: ‘‘ಸಿ’ ಗುಂಪಿಗೆ ಅಸಾಂವಿಧಾನಿಕ ಪದ ‘ಸ್ಪೃಶ್ಯ’ ಬದಲಿಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಗುರುತಿಸಿರುವಂತೆ ‘ವಿಮುಕ್ತ ಸಮುದಾಯ’ ಎಂದು ಗುರುತಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.