ADVERTISEMENT

ಒಳ ಮೀಸಲು ವರದಿ: ಭವಿಷ್ಯ ಇಂದು ನಿರ್ಧಾರ?

ಸಚಿವ ಸಂಪುಟ ಸಭೆಯಲ್ಲಿ ನ್ಯಾ, ನಾಗಮೋಹನ್‌ದಾಸ್‌ ಆಯೋಗದ ಶಿಫಾರಸು ಚರ್ಚೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 22:50 IST
Last Updated 6 ಆಗಸ್ಟ್ 2025, 22:50 IST
ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. 
ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.    

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಕುರಿತು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ದಾಸ್‌ ನೇತೃತ್ವದ ಏಕಸದಸ್ಯ ಆಯೋಗ ಸಲ್ಲಿಸಿರುವ ವರದಿಯ ಕುರಿತು ಗುರುವಾರ (ಆಗಸ್ಟ್‌ 7) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.

ನಾಗಮೋಹನ್‌ದಾಸ್‌ ಅವರು ಆರು ಶಿಫಾರಸುಗಳನ್ನು ಒಳಗೊಂಡ ಸುಮಾರು 1,765 ಪುಟಗಳ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಸಲ್ಲಿಸಿದ್ದರು. ‘ಆಯೋಗದ ವರದಿಯನ್ನು 7ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಚರ್ಚೆ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಹೇಳಿದ್ದರು.

ಒಳ ಮೀಸಲಾತಿಗೆ ಆಗ್ರಹಿಸಿ ಮಾದಿಗ ದಂಡೋರ ಸೇರಿದಂತೆ ವಿವಿಧ ದಲಿತ ಸಂಘಟನೆಗಳು ನ್ಯಾಯಾಲಯಗಳ ಒಳಗೆ ಮತ್ತು ಹೊರಗೆ 30 ವರ್ಷಗಳಿಂದಲೂ ಹೋರಾಟ ನಡೆಸುತ್ತಲೇ ಬಂದಿವೆ. ಒಳ ಮೀಸಲಾತಿ ಕಲ್ಪಿಸುವ ಸಂಬಂಧ 2009ರಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಸಲ್ಲಿಸಿದ್ದ ವರದಿಯನ್ನು ಬದಿಗಿಟ್ಟು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಹೊಸತಾಗಿ ಒಳ ಮೀಸಲಾತಿ ಹಂಚಿಕೆ ಮಾಡಿದ್ದರೂ ಜಾರಿಗೆ ಬಂದಿಲ್ಲ. ನಾಗಮೋಹನ್‌ದಾಸ್‌ ಆಯೋಗ ಹೊಸತಾಗಿ ಸಮೀಕ್ಷೆ ನಡೆಸಿ ಲಭ್ಯ ಶೇ 17ರಷ್ಟು ಮೀಸಲಾತಿ ಪ್ರಮಾಣವನ್ನು ಹಂಚಿಕೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ADVERTISEMENT

ಪರಿಶಿಷ್ಟ ಜಾತಿಯಲ್ಲಿ ಸಾಮಾಜಿಕ ನ್ಯಾಯದ ಬೇಡಿಕೆಗೆ ನಿರ್ಣಾಯಕ ತಿರುವು ನೀಡಲಿರುವ ಈ ವರದಿಯ ಜಾರಿಗೆ ಸಚಿವ ಸಂಪುಟ ಸಭೆ ನಿರ್ಣಯ ತೆಗೆದುಕೊಳ್ಳುತ್ತದೆಯೇ, ವರದಿಯ ಪರಿಶೀಲನೆಗೆ ಸಚಿವರ ಸಮಿತಿ ರಚಿಸಲಿದೆಯೇ ಅಥವಾ ಅಧ್ಯಯನ ನಡೆಸಲು ಸಚಿವ ಸಂಪುಟ ಉಪ ಸಮಿತಿ ರಚಿಸಲಿದೆಯೇ ಎಂಬ ಕುತೂಹಲ ಮೂಡಿದೆ.

ಮುಂಬರುವ ಅಧಿವೇಶನದಲ್ಲಿ ಆಯೋಗದ ವರದಿಯನ್ನು ಮಂಡಿಸಿ ಒಳ ಮೀಸಲಾತಿ ಜಾರಿಗೆ ಕ್ರಮ ತೆಗೆದುಕೊಳ್ಳಬೇಕೆಂದು ಸಚಿವ ಸಂಪುಟದಲ್ಲಿರುವ ಎಡಗೈ (ಮಾದಿಗ) ಸಮುದಾಯದ ಸಚಿವರು ಪಟ್ಟು ಹಿಡಿಯುವ ಸಾಧ್ಯತೆಯಿದೆ. ಆದರೆ, ಬಲಗೈ ಜಾತಿಯ ಸಚಿವರು, ಜನಸಂಖ್ಯೆ ಆಧರಿಸಿ ತಮ್ಮ ಸಮುದಾಯಕ್ಕೆ ಕಡಿಮೆ ಮೀಸಲಾತಿ ಹಂಚಿಕೆಯಾಗಿದೆ ಎಂದು ಅಪಸ್ವರ ಎತ್ತುವ ಮತ್ತು ಸಮುದಾಯಗಳ ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆ ಆಧರಿಸಿ ಮೀಸಲಾತಿ ನೀಡಬೇಕು. ವರದಿಯನ್ನು ತರಾತುರಿಯಲ್ಲಿ ಅಂಗೀಕರಿಸಬಾರದೆಂದು ಒತ್ತಾಯಿಸುವ ಸಂಭವವೂ ಇದೆ.

ಬಲಗೈ ಸಮುದಾಯದ ಕೆಲವು ಜಾತಿಗಳು ಈಗಾಗಲೇ ಈ ವರದಿಗೆ ಅಸಮಾಧಾನ ವ್ಯಕ್ತಪಡಿಸಿವೆ.

‘ವರದಿ ಸಾರ್ವಜನಿಕಗೊಳಿಸಿ’

‘ನ್ಯಾ.ನಾಗಮೋಹನ ದಾಸ್‌ ಆಯೋಗದ ವರದಿಯ ಕೆಲ ಅಂಶಗಳು ಸೋರಿಕೆ ಆಗಿದ್ದು ಅವುಗಳನ್ನು ಕಂಡು ಆತಂಕಗೊಂಡಿದ್ದೇವೆ. ಆತಂಕ ನಿವಾರಣೆಗಾಗಿ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕು’ ಎಂದು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ. ‘ಪರಿಶಿಷ್ಟರ 101 ಜಾತಿಗಳಿಂದ ಆಕ್ಷೇಪಣೆ ಸ್ವೀಕರಿಸಲು ಅವಕಾಶ ನೀಡಬೇಕು. ವರದಿಯಲ್ಲಿ ನ್ಯೂನತೆಗಳಿದ್ದರೆ ಸರಿಪಡಿಸಬೇಕು. ನಮ್ಮ ನಮ್ಮ ಸಮುದಾಯಗಳ ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆ ಆಧರಿಸಿ ಮೀಸಲಾತಿ ನೀಡಬೇಕು. ವರದಿಯನ್ನು ತರಾತುರಿಯಲ್ಲಿ ಅಂಗೀಕಾರ ಮಾಡಬಾರದು’ ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ‘ನಾಗಮೋಹನದಾಸ್‌ ಅವರಿಂದ ವರದಿ ಸ್ವೀಕರಿಸಿದ್ದೇವೆ. ಇನ್ನೂ ಅದನ್ನು ಓದಿಲ್ಲ. ಸಚಿವ ಸಂಪುಟದಲ್ಲಿ ಅದನ್ನು ಓದುತ್ತೇವೆ. ಆನಂತರ ಪ್ರತಿಕ್ರಿಯೆ ನೀಡುತ್ತೇವೆ. ಯಾವುದೇ ಸಮುದಾಯಕ್ಕೂ ಅನ್ಯಾಯ ಆಗದಂತೆ ಕ್ರಮವಹಿಸುತ್ತೇವೆ’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.