ಕರ್ನಾಟಕ ಹೈಕೋರ್ಟ್
ಬೆಂಗಳೂರು: ‘ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ದೊಡ್ಡಬಳ್ಳಾಪುರದ ಕೋನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೊಠಡಿಗೆ ಹೋಗುವುದಿಲ್ಲ’ ಎಂದು ಹೇಳಿದ ಆರೋಪದಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಎನ್.ರಶ್ಮಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ನನ್ನ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ದೊಡ್ಡಬಳ್ಳಾಪುರ ಕಸಬಾ ಹೋಬಳಿಯ ಕೋನಘಟ್ಟ ಗ್ರಾಮ ಪಂಚಾಯಿತಿ ಪಿಡಿಒ ಎನ್.ರಶ್ಮಿ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, ‘ಅರ್ಜಿದಾರರು ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ ಮತ್ತು ಇತರ ಆರೋಪಗಳು ಆಧಾರರಹಿತ’ ಎಂದು ದಾಖಲೆಗಳನ್ನು ಸಲ್ಲಿಸಿದರು.
ಇದನ್ನು ಪರಿಶೀಲಿಸಿದ ನ್ಯಾಯಪೀಠ, ‘ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ದುರುಪಯೋಗಕ್ಕೆ ಈ ಪ್ರಕರಣ ಮತ್ತೊಂದು ಉತ್ಕೃಷ್ಟ ಉದಾಹರಣೆಯಾಗಿದೆ’ ಎಂಬ ಅಭಿಪ್ರಾಯದೊಂದಿಗೆ ಅರ್ಜಿದಾರರ ವಿರುದ್ಧದ ಎಫ್‌ಐಆರ್ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿನ ನ್ಯಾಯಿಕ ಪ್ರಕ್ರಿಯೆಗೆ ತಡೆ ನೀಡಿ ಆದೇಶಿಸಿತು.
ಅಂತೆಯೇ, ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸ್ ಹಾಗೂ ದೂರುದಾರೆ ಕೋನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಾಂದಿನಿ ಅವರಿಗೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು.
ರಶ್ಮಿ ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಕಲಂ 3(1)(ಆರ್)(ಎಸ್) ಹಾಗೂ ಭಾರತೀಯ ನ್ಯಾಯ ಸಂಹಿತಾ–2023ರ ಕಲಂ 352ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.