ADVERTISEMENT

ದೌರ್ಜನ್ಯ ಪ್ರಕರಣಗಳಲ್ಲಿ ಮೇಲ್ಮನವಿಗೆ ನಿರಾಸಕ್ತಿ: ವಿವರಣೆ ಕೇಳಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 21:29 IST
Last Updated 31 ಮಾರ್ಚ್ 2021, 21:29 IST

ಬೆಂಗಳೂರು: ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳ ಆರೋಪಿಗಳ ಖುಲಾಸೆ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರಾಸಕ್ತಿ ತೋರುತ್ತಿರುವ ಕುರಿತು ವಿವರಣೆ ನೀಡುವಂತೆ ಅಭಿಯೋಜನಾ ಇಲಾಖೆ ನಿರ್ದೇಶಕರಿಗೆ ಹೈಕೋರ್ಟ್‌ ಬುಧವಾರ ನಿರ್ದೇಶನ ನೀಡಿದೆ.

ಎಸ್‌.ಸಿ ಮತ್ತು ಎಸ್‌.ಟಿ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆ–1989ರ ಅಡಿಯಲ್ಲಿ ದಾಖಲಾಗುವ ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳ ಖುಲಾಸೆ ಆಗುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠ, ಮೇಲ್ಮನವಿ ಸಲ್ಲಿಸುವ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಕುರಿತು ವಿವರಣೆ ನೀಡುವಂತೆ ಸೂಚಿಸಿದೆ.

ಎಸ್‌.ಸಿ ಮತ್ತು ಎಸ್‌.ಟಿ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿದ್ದ 1,097 ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿ 2019ರಲ್ಲಿ ಆದೇಶಗಳು ಪ್ರಕಟವಾಗಿದ್ದವು. ಈ ಪೈಕಿ 39 ಪ್ರಕರಣಗಳಲ್ಲಿ ಮಾತ್ರ ಮೇಲ್ಮನವಿ ಸಲ್ಲಿಸುವಂತೆ ಅಭಿಯೋಜನಾ ಇಲಾಖೆಯ ಉಪ ನಿರ್ದೇಶಕರು ಶಿಫಾರಸು ಮಾಡಿದ್ದರು. 2020ರಲ್ಲಿ 650 ಪ್ರಕರಣಗಳಲ್ಲಿ ಆರೋಪಿಗಳ ಖುಲಾಸೆಯಾಗಿದ್ದು, 46 ಪ್ರಕರಣಗಳಲ್ಲಿ ಮಾತ್ರ ಮೇಲ್ಮನವಿ ಸಲ್ಲಿಸಲು ಶಿಫಾರಸು ಮಾಡಲಾಗಿದೆ. ಈ ವರದಿಯನ್ನು ನ್ಯಾಯಪೀಠ ವಿಚಾರಣೆ ವೇಳೆ ಉಲ್ಲೇಖಿಸಿತು. ಪ್ರಕರಣದ ವಿಚಾರಣೆಯನ್ನು ಏಪ್ರಿಲ್‌ 16ಕ್ಕೆ ಮುಂದೂಡಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.