ಬೆಂಗಳೂರು: ‘ಕಾನೂನು ದುರುಪಯೋಗವು ಗುರಾಣಿಯಾಗಿ ಉಳಿಯುವುದಿಲ್ಲ. ಬದಲಿಗೆ, ಕತ್ತಿಯಾಗಿ ಝಳಪಿಸಬಲ್ಲದು’ ಎಂದು ಎಚ್ಚರಿಸಿರುವ ಹೈಕೋರ್ಟ್, ‘ಸಿವಿಲ್ ವ್ಯಾಜ್ಯಗಳಲ್ಲಿ ಕ್ರಿಮಿನಲ್ ಕಾನೂನನ್ನು ಅಸ್ತ್ರವಾಗಿ ಬಳಸುವುದರ ವಿರುದ್ಧ ವಿಚಾರಣಾ ನ್ಯಾಯಾಲಯಗಳು ಜಾಗ್ರತೆಯಾಗಿ ಮುಂದಡಿ ಇರಿಸಬೇಕು’ ಎಂದು ಕಿವಿಮಾತು ಹೇಳಿದೆ.
‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ನನ್ನ ವಿರುದ್ಧ ದಾಖಲಾಗಿರುವ ದೋಷಾರೋಪ ಪಟ್ಟಿ ರದ್ದುಗೊಳಿಸಬೇಕು’ ಎಂದು ಸೋಲಾಪುರದ ಬಿಲ್ಡರ್ ವಿಲಾಸ್ ಭೋರ್‌ಮಲ್‌ಜಿ ಓಸ್ವಾಲ್ (61) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಕುರಿತಂತೆ ಆದೇಶಿಸಿದೆ.
‘ಪ್ರಕರಣದಲ್ಲಿ ಇಬ್ಬರು ಪಾಲುದಾರರ ನಡುವೆ ಉಂಟಾದ ಆರ್ಥಿಕ ವಿವಾದಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳಲು ಪ್ರತಿವಾದಿ ಸೋಮಶೇಖರ್ ಕ್ರಿಮಿನಲ್ ನ್ಯಾಯವ್ಯವಸ್ಥೆ ದುರ್ಬಳಕೆ ಮಾಡಿಕೊಂಡಿರುವುದು ಕಂಡುಬಂದಿದೆ. ಇದು ಕಾನೂನಿನ ಮುಖವಾಡದಲ್ಲಿರುವ ಪ್ರತೀಕಾರದ ಅಸ್ತ್ರವಾಗಿದೆ’ ಎಂದು ಪೀಠ ಉಲ್ಲೇಖಿಸಿತು. ಅರ್ಜಿದಾರರ ವಿರುದ್ಧ ಎಸ್‌ಸಿ–ಎಸ್‌ಟಿ ಕಾಯ್ದೆಯಡಿ ದಾಖಲಾಗಿದ್ದ ದೂರು ಮತ್ತು ಸಂಬಂಧಿಸಿದ ದೋಷಾರೋಪ ಪಟ್ಟಿ ರದ್ದುಪಡಿಸಿದೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲ ಶ್ರೀನಾಥ ಕುಲಕರ್ಣಿ ವಾದ ಮಂಡಿಸಿದ್ದರು.
ಏಳು ವರ್ಷಗಳ ಹಿಂದೆ ನಗರದ ನೈಸ್ ರಸ್ತೆ ಬಳಿ ನಡೆದಿದ್ದ ರಸ್ತೆ ಅಪಘಾತ ಪ್ರಕರಣದಲ್ಲಿ; ‘ಅತಿವೇಗ, ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ಬೈಕ್ ಸವಾರನ ಸಾವಿಗೆ ಕಾರಣವಾಗಿದ್ದಾರೆ’ ಎಂಬ ಪ್ರಕರಣದಲ್ಲಿ ಅಪರಾಧಿಯನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ.
ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಎರಡು ತಿಂಗಳ ಸರಳ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಅಪರಾಧಿಸ ತುಮಕೂರಿನ ಜಯನಗರದ ಹರೀಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ರಾಜೇಶ್ ರೈ ಅವರಿದ್ದ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ದುಡುಕಿನ ವರ್ತನೆ ಮತ್ತು ನಿರ್ಲಕ್ಷ್ಯವನ್ನು ಪ್ರತಿಯೊಂದು ಪ್ರಕರಣಕ್ಕೂ ಅನ್ವಯಿಸಿ ಆಯಾ ಪ್ರಕರಣದ ವಾಸ್ತವಾಂಶದ ಮೇಲೆ ನಿರ್ಣಯಿಸಬೇಕು’ ಎಂಬ ಪೀಠ ಅಭಿಪ್ರಾಯಪಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.