ADVERTISEMENT

ಒಳ ಮೀಸಲಾತಿಗೂ ಪ್ರಕ್ರಿಯೆ ಆರಂಭ- ನಾಗಮೋಹನದಾಸ್‌ ವರದಿ ಅಂಗೀಕಾರ

ಸಂಪುಟ ಸಭೆಯಲ್ಲಿ ನಿರ್ಧಾರ l

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 19:48 IST
Last Updated 8 ಅಕ್ಟೋಬರ್ 2022, 19:48 IST
   

ಬೆಂಗಳೂರು: ಪರಿಶಿಷ್ಟ ಜಾತಿ (ಎಸ್.ಸಿ) ಮತ್ತು ಪರಿಶಿಷ್ಟ ಪಂಗಡಗಳಲ್ಲಿ (ಎಸ್.ಟಿ) ಒಳ ಮೀಸಲಾತಿಯನ್ನೂ ಅನುಷ್ಠಾನಕ್ಕೆ ತರಲು ಶನಿವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಈ ಕುರಿತ ಪ್ರಸ್ತಾವ ಸಿದ್ಧಪಡಿಸುವ ಜವಾಬ್ದಾರಿಯನ್ನು ಕಾನೂನು ಸಚಿವರು ಹಾಗೂ ಕಾನೂನು ಇಲಾಖೆಗೆ ವಹಿಸಲಾಗಿದೆ.

ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಆಯೋಗದ ವರದಿಯ ಶಿಫಾರಸಿನಂತೆ ಎಸ್‌.ಸಿ ಮತ್ತು ಎಸ್‌.ಟಿ ಮೀಸಲಾತಿಯನ್ನು ಹೆಚ್ಚಿಸುವ ನಿರ್ಣಯವನ್ನು ಶುಕ್ರವಾರ ನಡೆದ ವಿಧಾನಮಂಡಲದ ಸದನ ನಾಯಕರ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಅದಕ್ಕೆ ಪೂರಕವಾಗಿ ಆಯೋಗದ ವರದಿಯನ್ನು ಅಂಗೀಕರಿಸಲು ನಡೆದ ಸಂಪುಟ ಸಭೆಯಲ್ಲಿ ಒಳ ಮೀಸಲು ಅನುಷ್ಠಾನದ ತೀರ್ಮಾನವನ್ನೂ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ನಾಗಮೋಹನದಾಸ್‌ ಆಯೋಗದ ವರದಿಯನ್ನು ಯಥಾವತ್ತಾಗಿ ಒಪ್ಪಿಕೊಳ್ಳುವ ನಿರ್ಧಾರ
ವನ್ನು ಸಂಪುಟ ಸಭೆ ಕೈಗೊಂಡಿದೆ. ಎ.ಜೆ. ಸದಾಶಿವ ಆಯೋಗದ ವರದಿಯಕುರಿತು ತಮ್ಮ ವರದಿಯಲ್ಲಿ ಉಲ್ಲೇಖಿಸಿರುವ ನಾಗಮೋಹನದಾಸ್‌ ಅವರು, ಪರಿಶಿಷ್ಟರಲ್ಲಿ ಒಳ ಮೀಸಲಾತಿ ಅನುಷ್ಠಾನ ಅಗತ್ಯ ಎಂದು ಶಿಫಾರಸು ಮಾಡಿದ್ದರು. ಆ ಕುರಿತೂ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು’ ಎಂದರು.

ADVERTISEMENT

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿಗಳು ಹಾಗೂ ಅರೆ ಅಲೆಮಾರಿಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಸೇರಿದಂತೆ ನಾಗಮೋಹನದಾಸ್‌ ಆಯೋಗದ ಎಲ್ಲ ಶಿಫಾರಸುಗಳ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ ಎಂದು ಹೇಳಿದರು.

ಆದೇಶದ ಮೂಲಕ ಮೀಸಲು ಹೆಚ್ಚಳ

ಎಸ್‌.ಸಿ ಮತ್ತು ಎಸ್‌.ಟಿ ಮೀಸಲಾತಿ ಹೆಚ್ಚಿಸುವ ತೀರ್ಮಾನವನ್ನು ಸರ್ಕಾರಿ ಆದೇಶದ ಮೂಲಕವೇ ಅನುಷ್ಠಾನಕ್ಕೆ ತರಲಾಗುವುದು. ಎರಡರಿಂದ ಮೂರು ದಿನಗಳಲ್ಲಿ ಈ ಆದೇಶ ಹೊರಬೀಳಲಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

‘ಎಸ್‌.ಸಿ ಮೀಸಲಾತಿ ಶೇಕಡ 15ರಿಂದ ಶೇ 17ಕ್ಕೆ ಮತ್ತು ಎಸ್‌.ಟಿ ಮೀಸಲಾತಿ ಶೇ 3ರಿಂದ ಶೇ 7ಕ್ಕೆ ಹೆಚ್ಚಳವಾಗಲಿದೆ. ಯಾವ ಪ್ರವರ್ಗದ ಮೀಸಲಾತಿ ಕಡಿತವಾಗಲಿದೆ? ಹೇಗೆ ಅನುಷ್ಠಾನಕ್ಕೆ ತರಲಾಗುತ್ತದೆ? ಎಂಬ ಪ್ರಶ್ನೆಗಳಿಗೆ ಆದೇಶದಲ್ಲೇ ಉತ್ತರ ಒದಗಿಸಲಾಗುವುದು’ ಎಂದರು.

ತಮಿಳುನಾಡಿನಲ್ಲಿ ಶೇ 69ರಷ್ಟು ಮೀಸಲಾತಿ ಇದೆ. ಉತ್ತರ ಪ್ರದೇಶದಲ್ಲಿ ಶೇ 60ರಷ್ಟು ಮೀಸಲಾತಿ ಇದೆ. ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ಕಲ್ಪಿಸಿದ ಬಳಿಕ ಕೇಂದ್ರ ಸರ್ಕಾರದ ಮೀಸಲಾತಿ ಪ್ರಮಾಣವೂ ಶೇ 60ಕ್ಕೆ ತಲುಪಿದೆ. ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳ ಮೀಸಲಾತಿ ಸಂವಿಧಾನದ ಪರಿಚ್ಛೇದ 9ರ ವ್ಯಾಪ್ತಿಯಲ್ಲಿದೆ. ಉಳಿದ ರಾಜ್ಯಗಳಲ್ಲಿ ಕೈಗೊಂಡಿರುವ ತೀರ್ಮಾನಗಳ ಬಗ್ಗೆ ಸುಪ್ರೀಂ ಕೋರ್ಟ್‌ ತಡೆ ಅಥವಾ ಆದೇಶ ನೀಡಿಲ್ಲ ಎಂದು ಹೇಳಿದರು.

ಈಗಲೇ ಸಂವಿಧಾನ ತಿದ್ದುಪಡಿಯ ಅಗತ್ಯ ಕಂಡುಬಂದಿಲ್ಲ. ಮುಂದೆ ಅಂತಹ ಪ್ರಶ್ನೆ ಉದ್ಭವಿಸಿದಲ್ಲಿ ರಾಜ್ಯ ಸರ್ಕಾರ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.