ADVERTISEMENT

ಎಸ್‌ಸಿ–ಎಸ್‌ಟಿ ಮೀಸಲು ಹೆಚ್ಚಳವನ್ನು ಶೆಡ್ಯೂಲ್ 9ಕ್ಕೆ ಸೇರಿಸಲು ಬದ್ಧ: ಸಿಎಂ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 0:09 IST
Last Updated 24 ಮಾರ್ಚ್ 2023, 0:09 IST
   

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸಿ ಈಗಾಗಲೇ ಕಾನೂನು ರಚಿಸಿದ್ದು, ಅದನ್ನು ಸಂವಿಧಾನದ ಶೆಡ್ಯೂಲ್ 9ಕ್ಕೆ ಸೇರಿಸುವ ಬದ್ಧತೆ ಸರ್ಕಾರಕ್ಕಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಪರಿಶಿಷ್ಟರ ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಸುರ್ಜೇವಾಲಾ ಅವರು ಮೀಸಲಾತಿಗೆ ಸಂಬಂಧಿಸಿದಂತೆ ಇತಿಹಾಸ ಓದಬೇಕು. ಅಷ್ಟೇ ಅಲ್ಲ, ಮೀಸಲಾತಿ ಬಗ್ಗೆ ಕಾಂಗ್ರೆಸ್‌ಗೆ ಮಾತನಾಡುವ ನೈತಿಕ ಹಾಗೂ ರಾಜಕೀಯ ಅಧಿಕಾರ ಇಲ್ಲ’ ಎಂದರು.

ಎಸ್‌ಸಿ, ಎಸ್‌ಟಿ ಮೀಸಲು: ಶೆಡ್ಯೂಲ್‌ 9ಕ್ಕೆ ಸೇರಿಸಲು ಕೇಂದ್ರಕ್ಕೆ ಪತ್ರ

ADVERTISEMENT

ಬೆಂಗಳೂರು: ಪರಿಶಿಷ್ಟ ಜಾತಿಗೆ ಶೇ 15ರಿಂದ ಶೇ 17, ಪರಿಶಿಷ್ಟ ಪಂಗಡಕ್ಕೆ ಶೇ 3ರಿಂದ ಶೇ7ರಷ್ಟು ಮೀಸಲಾತಿ ಹೆಚ್ಚಿಸಿ ರಾಜ್ಯ ಸರ್ಕಾರ ಮಾಡಿದ ‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ–2022’ನ್ನು ಸಂವಿಧಾನದ ಶೆಡ್ಯೂಲ್‌ 9ರಲ್ಲಿ ಸೇರಿಸುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್‌ ಭಲ್ಲಾ ಅವರಿಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಪತ್ರ ಬರೆದಿದ್ದಾರೆ.

ಕಾಯ್ದೆಯ ಪ್ರತಿ ಸಹಿತ ಗುರುವಾರ ಪತ್ರ ಬರೆದಿರುವ ಅವರು, ಕಾಯ್ದೆಯನ್ನು ಸಂವಿಧಾನದ ಶೆಡ್ಯೂಲ್‌ 9ರಲ್ಲಿ ಸೇರಿಸಲು ಫೆ. 9ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ತೀರ್ಮಾನವನ್ನೂ ಉಲ್ಲೇಖಿಸಿದ್ದಾರೆ. ‘ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಹೀಗಾಗಿ, ಕಾಯ್ದೆಯನ್ನು ತಮಗೆ ಕಳುಹಿಸುತ್ತಿದ್ದೇನೆ’ ಎಂದೂ ಪತ್ರದಲ್ಲಿ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.