ಬೆಂಗಳೂರು: ‘ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಮಾತ್ರ ಒಳಮೀಸಲಾತಿ ಜಾರಿ ಮಾಡಿದೆ. ಪರಿಶಿಷ್ಟ ಪಂಗಡಗಳಿಗೂ ಒಳಮೀಸಲಾತಿ ವಿಸ್ತರಿಸಲು ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ಶಾಸಕರ ಭವನದಲ್ಲಿ ಗುರುವಾರ ನಡೆದ ವಿವಿಧ ಬುಡಕಟ್ಟು ಸಮುದಾಯಗಳ ನಾಯಕರ ಸಭೆ ಆಗ್ರಹಿಸಿದೆ.
‘2024ರ ಆಗಸ್ಟ್ 1ರಂದು ಪ್ರಕಟವಾದ ಒಳಮೀಸಲಾತಿ ಕುರಿತ ಐತಿಹಾಸಿಕ ತೀರ್ಪು ಪರಿಶಿಷ್ಟ ಜಾತಿ ಜತೆ ಪರಿಶಿಷ್ಟ ಪಂಗಡದಲ್ಲೂ ಮೀಸಲಾತಿ ವರ್ಗೀಕರಣ ಮಾಡಬೇಕು ಎಂದು ಸ್ಪಷ್ಟವಾಗಿ ಹೇಳಿತ್ತು. ಆದರೆ, ರಾಜ್ಯ ಸರ್ಕಾರ ಅದನ್ನು ಪಾಲಿಸಿಲ್ಲ’ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಸಭೆಯ ಬಳಿಕ ಬುಡಕಟ್ಟು ಸಮುದಾಯಗಳ ನಾಯಕರು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಕಾನೂನು ಸಚಿವ ಎಚ್.ಕೆ.ಪಾಟೀಲ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
‘ಪರಿಶಿಷ್ಟ ಪಂಗಡದಲ್ಲಿ ಮೀಸಲಾತಿ ಜಾರಿಯಲ್ಲಿ ಸಮಸ್ಯೆ ಇದೆ. ಸಣ್ಣ ಬುಡಕಟ್ಟುಗಳು, ಸೂಕ್ಷ್ಮ ಬುಡಕಟ್ಟುಗಳು, ದುರ್ಬಲ ಬುಡಕಟ್ಟುಗಳು ಮತ್ತು ಪ್ರಬಲ ಸಮುದಾಯಗಳು ಒಂದೇ ತಟ್ಟೆಯಲ್ಲಿನ ಊಟವನ್ನು ಹಂಚಿಕೊಳ್ಳುವಂತಾಗಿದೆ. ಸರ್ಕಾರ ಈ ಬಗ್ಗೆ ಮುತುವರ್ಜಿ ವಹಿಸಿ, ಇದಕ್ಕಾಗಿ, ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಆಯೋಗ ರಚಿಸಬೇಕು’ ಎಂದು ಒತ್ತಾಯಿಸಿದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಶಾಂತಾರಾಮ್ ಸಿದ್ಧಿ, ಸಮುದಾಯದವರಾದ ಜಡೆಯ ಗೌಡ, ಗಣೇಶ್ ಬೆಟ್ಟಕುರುಬ, ಹಸಲರ ಮುತ್ತಪ್ಪ, ಕುಡಿಯರ ಮಿಟ್ಟು ರಂಜನ್, ಶಿವರಾಜ್ ಯೆರವ, ರಾಜು ಇರುಳಿಗ, ಹಕ್ಕಿಪಿಕ್ಕಿ ಕಾಮರಾಜ್, ತ್ಯಾಗರಾಜು, ಮರಾಠಿ ನಾಯ್ಕ ಸಮುದಾಯದ ಎಚ್.ವಿ.ಚಂದ್ರಶೇಖರ್, ಎಸ್.ಎನ್.ಅಶೋಕ್, ಕೆ.ಎಸ್.ಮಹೇಶ್, ಗೌಡ್ಲು ಚೇತನ್, ಎಂ.ಸಿ.ಯೋಗೀಶ್ ಮತ್ತು ವಾದಿರಾಜ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.