ಬೆಂಗಳೂರು: ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ಕನಿಷ್ಠ ವಯಸ್ಸನ್ನು 2025–26ನೇ ಸಾಲಿಗೆ ಮಾತ್ರ ಅನ್ವಯವಾಗುವಂತೆ 5 ವರ್ಷ 5 ತಿಂಗಳಿಗೆ ನಿಗದಿಗೊಳಿಸಿದ ಶಾಲಾ ಶಿಕ್ಷಣ ಇಲಾಖೆ ಆದೇಶವನ್ನು ಪಾಲಿಸದೇ ಇರಲು ಸಿಬಿಎಸ್‌ಇ, ಐಸಿಎಸ್‌ಇ ಸೇರಿದಂತೆ ಕೇಂದ್ರ ಪಠ್ಯಕ್ರಮ ಅನುಸರಿಸುವ ಬಹುತೇಕ ಶಾಲೆಗಳು ನಿರ್ಧರಿಸಿವೆ. ಕೆಲ ಶಾಲೆಗಳು ಸಮ್ಮತಿ ಸೂಚಿಸಿವೆ.
ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಕಡ್ಡಾಯ ಶಿಕ್ಷಣ ಕಾಯ್ದೆಯ ಅನ್ವಯ ಒಂದನೇ ತರಗತಿ ಪ್ರವೇಶದ ವಯೋಮಿತಿಯನ್ನು ಕೇಂದ್ರ ಸರ್ಕಾರ 6 ವರ್ಷಕ್ಕೆ ನಿಗದಿಗೊಳಿಸಿ 2024ರಲ್ಲೇ ಆದೇಶ ಹೊರಡಿಸಿದೆ. ಆ ಪ್ರಕಾರ, 2024–25ನೇ ಸಾಲಿನಿಂದಲೇ ನಿಯಮ ಪಾಲಿಸಲಾಗಿದೆ. ಇದೊಂದು ವರ್ಷ ವಯೋಮಿತಿ ಸಡಿಲಿಕೆಗೆ ಅವಕಾಶ ನೀಡಿದರೆ ಹೊರ ರಾಜ್ಯಕ್ಕೆ ವರ್ಗಾವಣೆಗೊಳ್ಳುವ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ತೊಡಕಾಗುತ್ತದೆ. ಮತ್ತೆ ಮುಂದಿನ ಶೈಕ್ಷಣಿಕ ವರ್ಷಕ್ಕೆ 6 ವರ್ಷ ಕಡ್ಡಾಯವಾಗುತ್ತದೆ. ಹೀಗಿರುವಾಗ ಸಡಿಲಿಕೆ ನಿಯಮ ಪಾಲಿಸುವುದರಲ್ಲಿ ಅರ್ಥವಿಲ್ಲ ಎನ್ನುವುದು ಕೇಂದ್ರ ಪಠ್ಯಕ್ರಮ ಅನುಸರಿಸುವ ಶಾಲೆಗಳ ವಾದ.
‘ಕೇಂದ್ರ ಪಠ್ಯಕ್ರಮದ ಶಾಲೆಗಳ ವ್ಯಾಪ್ತಿ ದೇಶದ ಎಲ್ಲೆಡೆ ಒಂದೇ ರೀತಿ ಇದೆ. ಈ ವರ್ಷದಿಂದ ಮಹಾರಾಷ್ಟ್ರವೂ ವಯೋಮಿತಿಯನ್ನು 6 ವರ್ಷಕ್ಕೆ ಕಡ್ಡಾಯಗೊಳಿಸಿದೆ. ರಾಜ್ಯ ಸರ್ಕಾರದ ಆದೇಶದಂತೆ 5 ವರ್ಷ, 5 ತಿಂಗಳು ಪ್ರವೇಶ ನೀಡಿದರೆ ಕೇಂದ್ರೀಯ ವಿದ್ಯಾಲಯ ಅಥವಾ ಬೇರೆ ರಾಜ್ಯಗಳಿಗೆ ತೆರಳುವ ಮಕ್ಕಳಿಗೆ ವಯೋಮಿತಿ ವ್ಯತ್ಯಾಸದಿಂದ ಅನ್ಯಾಯವಾಗುತ್ತದೆ. ಹಾಗಾಗಿ, ನಿಯಮ ಪಾಲಿಸದೇ ಇರಲು ನಿರ್ಧರಿಸಿದ್ದೇವೆ. ಒತ್ತಡ ಬಂದರೆ ಕೋರ್ಟ್ ಮೊರೆ ಹೋಗುತ್ತೇವೆ’ ಎನ್ನುತ್ತಾರೆ ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಚಾಲಕ ಡಿ. ಶಶಿಕುಮಾರ್.
ಕೆಲ ಶಾಲೆಗಳ ಸಮ್ಮತಿ:
ಕೇಂದ್ರ ಪಠ್ಯಕ್ರಮ ಅನುಸರಿಸುವ ಕೆಲ ಶಾಲೆಗಳು 5 ವರ್ಷ, 5 ತಿಂಗಳು ವಯೋಮಿತಿಯ ಪ್ರಕಾರವೇ ಪ್ರವೇಶ ನೀಡಲು ಸಮ್ಮತಿಸಿವೆ. ಆದರೆ, ಕಳೆದ ಸಾಲಿನಲ್ಲಿ 4 ವರ್ಷ ತುಂಬಿದ ಮಕ್ಕಳಿಗೆ ಮಾತ್ರ ಎಲ್‌ಕೆಜಿ ಪ್ರವೇಶ ನೀಡಲಾಗಿತ್ತು. ಆ ಮಕ್ಕಳು ಈಗ ಯುಕೆಜಿಗೆ ಪ್ರವೇಶ ಪಡೆಯುತ್ತಿವೆ. ಎಲ್‌ಕೆಜಿ, ಯುಕೆಜಿ ಪೂರ್ಣಗೊಳಿಸದ ಮಕ್ಕಳಿಗೆ 6 ವರ್ಷ ಕಡ್ಡಾಯವಾಗಿರುವುದರಿಂದ ಹೊಸ ಆದೇಶ ಪಾಲಿಸಿದರೂ, ಪ್ರಯೋಜನವಾಗದು.
‘ಐಸಿಎಸ್‌ಸಿ, ಸಿಬಿಎಸ್‌ಐ ಓದುವ ಮಕ್ಕಳು ಆರು ವರ್ಷ ಪೂರೈಸಿದ್ದರೆ ಒಂದನೇ ತರಗತಿಯ ಶಿಕ್ಷಣ ಸುಲಲಿತವಾಗುತ್ತದೆ. ಆದರೂ, ಪೋಷಕರು ಬಯಸಿದರೆ 5 ವರ್ಷ, 5 ತಿಂಗಳು ತುಂಬಿದ ಮಕ್ಕಳಿಗೂ ಈ ಬಾರಿ ಪ್ರವೇಶ ನೀಡುತ್ತೇವೆ. ನಿಯಮಗಳ ಬದಲಾವಣೆಯಿಂದ ಪ್ರಯೋಜನ ಪಡೆಯುವ ಮಕ್ಕಳು ಅತ್ಯಂತ ಕಡಿಮೆ ಎನ್ನುತ್ತಾರೆ’ ರಾಷ್ಟ್ರೀಯ ವಸತಿ ಶಾಲೆಯ ಮುಖ್ಯಶಿಕ್ಷಕಿ ಸುಜಾತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.