ADVERTISEMENT

ಶಾಲಾ ಶುಲ್ಕ ನಿಯಂತ್ರಣಕ್ಕೆ ಪ್ರತ್ಯೇಕ ಸಂಸ್ಥೆ: ಅಂತಿಮ ವರದಿ ಸಲ್ಲಿಕೆ

ಮುಖ್ಯಮಂತ್ರಿಗೆ ಅಂತಿಮ ವರದಿ ಸಲ್ಲಿಸಿದ ರಾಜ್ಯ ಶಿಕ್ಷಣ ನೀತಿ ಆಯೋಗ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 21:58 IST
Last Updated 8 ಆಗಸ್ಟ್ 2025, 21:58 IST
siddaramaiah
siddaramaiah   

ಬೆಂಗಳೂರು: ಖಾಸಗಿ ಶಾಲೆಗಳಲ್ಲಿನ ಶುಲ್ಕ ನಿಯಂತ್ರಿಸಲು ಸರ್ಕಾರ ಪ್ರತ್ಯೇಕ ಶುಲ್ಕ ನಿಯಂತ್ರಣ ಸಂಸ್ಥೆಯನ್ನು ಸ್ಥಾಪಿಸಬೇಕು ಎಂದು ಪ್ರೊ. ಸುಖದೇವ್‌ ಥೋರಟ್‌ ಅಧ್ಯಕ್ಷತೆಯ ರಾಜ್ಯ ಶಿಕ್ಷಣ ನೀತಿ ಆಯೋಗ ಶಿಫಾರಸು ಮಾಡಿದೆ.

ಖಾಸಗಿ ಶಾಲೆಗಳ ಜತೆಗೆ, ಖಾಸಗಿ ಪೂರ್ವ ಪ್ರಾಥಮಿಕ ಶಾಲೆಗಳನ್ನೂ ನಿಯಂತ್ರಿಸಬೇಕು. ಅದಕ್ಕಾಗಿ ಪ್ರತ್ಯೇಕ ನಿಯಂತ್ರಣ ಚೌಕಟ್ಟು ರೂಪಿಸಬೇಕು. ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಬೇಕು. ಶಿಕ್ಷಣದ ಖಾಸಗೀಕರಣವನ್ನು ತಡೆಯಬೇಕು. ಪಠ್ಯಪುಸ್ತಕಗಳಿಗಾಗಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ (ಎನ್‌ಸಿಇಆರ್‌ಟಿ) ಮೇಲಿನ ಅವಲಂಬನೆ ಕಡಿಮೆ ಮಾಡಬೇಕು. ಪಠ್ಯ ವಿಷಯಗಳನ್ನು ಸ್ಥಳೀಯವಾಗಿಸಬೇಕು. ಶಾಲಾ ಶಿಕ್ಷಣಕ್ಕೆ ಪ್ರತ್ಯೇಕವಾದ ಸಮಗ್ರ ಪಠ್ಯಪುಸ್ತಕಗಳನ್ನು ರಚಿಸಬೇಕು ಎಂದು ಹೇಳಿದೆ. 

ಎನ್‌ಇಪಿಯಲ್ಲಿ ತರಗತಿಗಳನ್ನು ಪೂರ್ವಪ್ರಾಥಮಿಕ ಒಳಗೊಂಡು 5ರವರೆಗೆ, 6ರಿಂದ 8, 9ರಿಂದ 12ನೇ ತರಗತಿ ಎಂದು ಮೂರು ಹಂತದ ವಿಂಗಡಣೆ ಮಾಡಲಾಗಿತ್ತು. ಎಸ್‌ಇಪಿ ಅದನ್ನು ಮಾರ್ಪಡಿಸಿ, ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪ್ರತ್ಯೇಕಗೊಳಿಸಿದೆ. 1ರಿಂದ 8ನೇ ತರಗತಿ ಹಾಗೂ 9ರಿಂದ 12ನೇ ತರಗತಿಯನ್ನು ಎರಡು ಗುಂಪುಗಳಾಗಿ ವಿಂಗಡಿಸಿದೆ.

ADVERTISEMENT

ಪರಿಣಾಮಕಾರಿ ಶಿಕ್ಷಣದ ಅನುಷ್ಠಾನಕ್ಕೆ ಕ್ಷೇತ್ರ ಶಿಕ್ಷಣ ವಲಯಕ್ಕೆ ಹೆಚ್ಚು ಅಧಿಕಾರ ನೀಡಬೇಕು. ಸಮಾನಾಂತರ ವಿಭಾಗಗಳನ್ನು ಆಯುಕ್ತಾಲಯದಲ್ಲಿ ವಿಲೀನಗೊಳಿಸಬೇಕು. ಭಾರತೀಯ ಜ್ಞಾನ ವ್ಯವಸ್ಥೆ ಕೋರ್ಸ್‌ಗಾಗಿ ಸಮಿತಿ ರಚಿಸಬೇಕು. ಜೀವಮಾನ ಕಲಿಕೆ ನಿರ್ದೇಶನಾಲಯ ಸ್ಥಾಪಿಸಬೇಕು. ರಾಜ್ಯ ಬಜೆಟ್‌ನ ಒಟ್ಟು ವೆಚ್ಚದಲ್ಲಿ ಶಿಕ್ಷಣಕ್ಕೆ ಶೇ 30ರಷ್ಟು ಮೀಸಲಿಡಬೇಕು. ಸಮಾನತೆ, ಗುಣಮಟ್ಟ ಮತ್ತು ತರಬೇತಿಗಾಗಿ ಹಣ ಮೀಸಲಿಡಬೇಕು. ಸಂವಿಧಾನ ಮೌಲ್ಯ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು. ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಎಲ್ಲ ಸರ್ಕಾರಿ ಶಾಲೆಗಳಲ್ಲೂ ಆರಂಭಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.