ADVERTISEMENT

ಸೆಪ್ಟೆಂಬರ್‌ನಲ್ಲಿ ಶಾಲೆ ಆರಂಭವಾಗುವ ಸಾಧ್ಯತೆ

ಶಿಕ್ಷಕರ ವರ್ಗಾವಣೆ, ಪಿಯು ಉ‍‍‍ಪನ್ಯಾಸಕರ ನೇಮಕಾತಿ ಶೀಘ್ರ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 19:30 IST
Last Updated 15 ಜೂನ್ 2020, 19:30 IST
ಸುರೇಶ್‌ಕುಮಾರ್‌
ಸುರೇಶ್‌ಕುಮಾರ್‌   

ಬೆಂಗಳೂರು: ಪೋಷಕರ ಅಭಿಪ್ರಾಯ ಸಂಗ್ರಹ, ಪರೀಕ್ಷೆ ಮತ್ತು ಫಲಿತಾಂಶ ಪ್ರಕಟ, ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ... ಹೀಗೆ ಎಲ್ಲವೂ ಅಂದುಕೊಂಡಂತೆ ಮುಕ್ತಾಯಗೊಂಡರೆ ಸೆಪ್ಟೆಂಬರ್‌ ವೇಳೆಗೆ ಶಾಲೆಗಳು ಆರಂಭವಾಗುವ ಸಾಧ್ಯತೆ ಇದೆ.

‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಈ ಸುಳಿವು ನೀಡಿದರಾದರೂ ಖಚಿತವಾಗಿ ಏನನ್ನೂ ಹೇಳಲಿಲ್ಲ. ‘ಶಾಲೆ ಮತ್ತೆ ಯಾವಾಗ ಆರಂಭವಾಗುತ್ತದೆ ಎಂಬುದನ್ನು ನಿರ್ದಿಷ್ಟವಾಗಿ ಈಗಲೇ ಹೇಳಲಾಗದು. ಪರಿಸ್ಥಿತಿ ಗಮನಿಸಿ ಕೇಂದ್ರ ನಿರ್ಧಾರ ಕೈಗೊಳ್ಳಲಿದೆ.

ಆದರೆ, ಸೆ‍ಪ್ಟೆಂಬರ್‌ಗೆ ಮೊದಲೇ ಫಲಿತಾಂಶಗಳು ಪ್ರಕಟವಾಗಲಿವೆ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕೊನೆಗೊಳ್ಳಲಿದೆ. ಹೀಗಾಗಿ ಎಲ್ಲವೂ ಯೋಚಿಸಿದಂತೆ ನಡೆದರೆ ಸೆಪ್ಟೆಂಬರ್ ವೇಳೆಗೆ ಶೈಕ್ಷಣಿಕ ಚಟುವಟಿಕೆ ಆರಂಭವಾಗುವುದಕ್ಕೆ ರಾಜ್ಯ ಸಜ್ಜಾಗಬಹುದು’ ಎಂದರು.

ADVERTISEMENT

’ಮಕ್ಕಳ ಸುರಕ್ಷತೆಗೆ ಆದ್ಯತೆ ಕೊಟ್ಟು ಪರೀಕ್ಷೆ ನಡೆಸುತ್ತೇವೆ. ಈ ಬಗ್ಗೆ ಪೋಷಕ ರಲ್ಲಿ ಆತಂಕ ಬೇಡ’ ಎಂದು ಹೇಳಿದರು. ‘ನಮ್ಮ ಸಿದ್ಧತೆ, ತಜ್ಞರ ಅಭಿಪ್ರಾಯಗಳನ್ನು ಅರಿತುಕೊಂಡೇ ಹೈಕೋರ್ಟ್‌ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದಕ್ಕೆ ಅನುಮತಿ ನೀಡಿದೆ. ಇಂತಹ ವಿಚಾರಗಳಲ್ಲಿ ಸುಪ್ರೀಂ ಕೋರ್ಟ್ ಸಹ ಹಸ್ತಕ್ಷೇಪ ಮಾಡುವುದು ಕಡಿಮೆ. ಬುಧವಾರ ಸುಪ್ರೀಂ ಕೋರ್ಟ್‌ ತೀರ್ಪು ಸಹ ಪ್ರಕಟವಾಗುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಕೋವಿಡ್‌ ದೃಢಪಟ್ಟವರಲ್ಲಿ 14ರಿಂದ 16 ವರ್ಷದೊಳಗಿನವರ ಸಂಖ್ಯೆ ಕೇವಲ 264. ಅದರಲ್ಲಿ 121 ಮಂದಿ ಗುಣಮುಖರಾಗಿದ್ದಾರೆ’ ಎಂದು ಸಚಿವರು ಸ್ಪಷ್ಟಪಡಿಸಿದರು.

ಬದಲಿ ವ್ಯವಸ್ಥೆ ಆಗಲೇಬೇಕು: ‘ಶೈಕ್ಷಣಿಕ ಚಟುವಟಿಕೆ ಆರಂಭವಾಗುವ ವೇಳೆ ಕೊರೊನಾ ಹರಡುವಿಕೆ ಜಾಸ್ತಿ ಇದ್ದರೆ ದಿನ ಬಿಟ್ಟು ದಿನ ತರಗತಿ, ತಜ್ಞರು ಸೂಚಿಸುವ ಇತರ ಕ್ರಮಗಳನ್ನು ಜಾರಿಗೆ ತರಲೇಬೇಕಾಗುತ್ತದೆ. ಟಿ.ವಿ ಚಾನೆಲ್‌ ಮೂಲಕವೂ ಬೋಧನೆ ನಡೆಸುವ ಚಿಂತನೆ ಇದೆ. ಚಿಣ್ಣರ ಆನ್‌ಲೈನ್ ತರಗತಿ ಸ್ಥಗಿತ ಕುರಿತಂತೆ ಅಧಿಕೃತ ಆದೇಶವನ್ನು ಸೋಮವಾರ ಪ್ರಕಟಿಸಲಾಗಿದೆ. ಪರ್ಯಾಯ ಶಿಕ್ಷಣ ವ್ಯವಸ್ಥೆಯ ಕುರಿತಂತೆ ತಜ್ಞರ ಸಮಿತಿ ಸೂಚಿಸುವ ಕ್ರಮವನ್ನು ಇಲಾಖೆ ಅನುಸರಿಸಲಿದೆ’ ಎಂದರು.

* ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಅಣಕು ಪ್ರಾತ್ಯಕ್ಷಿಕೆ ಆರಂಭ

* ಮೌಲ್ಯಮಾಪನ ಬಳಿಕ ಉಪನ್ಯಾಸಕರ ವೈದ್ಯಕೀಯ ಪರೀಕ್ಷೆಗೆ ಕ್ರಮ

* ಹೆಚ್ಚುವರಿ ಶುಲ್ಕ ಮರಳಿಸಿದ 350 ಶಾಲೆಗಳು

‘ಹೆಚ್ಚುವರಿ ಶುಲ್ಕ ಪಡೆದ ಬಗ್ಗೆ ದೂರು ಬಂದ ಶಾಲೆಗೆ ಕಂಟಕ ನಿಶ್ಚಿತ. ಸಾರ್ವಜನಿಕರು ಸಹಾಯವಾಣಿಗೆ ಈಗಾಗಲೇ 1,250 ದೂರುಗಳನ್ನು ನೀಡಿದ್ದು, ಇದರ ಫಲವಾಗಿ 350 ಶಾಲೆಗಳು ಹೆಚ್ಚಿಸಿದ ಶುಲ್ಕ ವಾಪಸ್ ಪಡೆದಿವೆ. ಶಿಕ್ಷಣ ಕಾಯ್ದೆ, ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿಯಲ್ಲಿ ಕ್ರಮ ಕೈಗೊಳ್ಳುವ ಎಲ್ಲ ಅಧಿಕಾರ ಸರ್ಕಾರಕ್ಕಿದೆ. ಇದಕ್ಕೆ ಸಿಬಿಎಸ್ಇ, ಐಸಿಎಸ್ಇ ಶಾಲೆಗಳೂ ಹೊರತಲ್ಲ‘ ಎಂದು ಸುರೇಶ್ ಕುಮಾರ್ ಹೇಳಿದರು.

18ರಿಂದ ಪಿಯು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ

‘ಇದೇ 18ರಂದು ನಡೆಯುವ ದ್ವಿತೀಯ ಪಿಯು ಇಂಗ್ಲಿಷ್‌ ಪರೀಕ್ಷೆಯ ಬಳಿಕ ದ್ವಿತೀಯ ಪಿಯು ಉಪನ್ಯಾಸಕರ ನೇಮಕ ಪ್ರಕ್ರಿಯೆ ಆರಂಭವಾಗಲಿದೆ. ಈಗಾಗಲೇ ದಾಖಲೆ ಪರಿಶೀಲನೆ ಮುಗಿಯುವ ಹಂತಕ್ಕೆ ತಲುಪಿದೆ. ಕೌನ್ಸೆಲಿಂಗ್ ನಡೆಸುವುದಕ್ಕೆ ಮೊದಲಾಗಿ ಯಾವ ಕಾಲೇಜಿನಲ್ಲಿ ಎಷ್ಟು ನೇಮಕಾತಿ ಅಗತ್ಯ ಇದೆ ಎಂಬುದನ್ನು ತಿಳಿಯಬೇಕಾಗುತ್ತದೆ. ಹೀಗಾಗಿ ಜುಲೈ ಅಂತ್ಯದೊಳಗೆ ಈ ಎಲ್ಲ ಪ್ರಕ್ರಿಯೆ ಕೊನೆಗೊಂಡು ನೇಮಕಾತಿ ಆದೇಶ ಅಭ್ಯರ್ಥಿಗಳ ಕೈಸೇರಲಿದೆ’ ಎಂದು ಸಚಿವರು ಭರವಸೆ ನೀಡಿದರು.

ಆರ್‌ಟಿಇ ಬಾಕಿ ಪಾವತಿಗೆ ಪ್ರಯತ್ನ

‘ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ (ಆರ್‌ಟಿಇ) ಖಾಸಗಿ ಶಾಲೆಗಳಿಗೆ ಶುಲ್ಕ ರೂಪದಲ್ಲಿ ಸರ್ಕಾರ ಈಚೆಗೆ ₹ 275 ಕೋಟಿ ಬಿಡುಗಡೆ ಮಾಡಿದೆ. ಇನ್ನುಳಿದ ಕಂತನ್ನು 3–4 ತಿಂಗಳಲ್ಲಿ ಪಾವತಿಸಲಾಗುತ್ತದೆ. ಕಳೆದ ವರ್ಷದ ಬಾಕಿ ಶುಲ್ಕವನ್ನು (ಸುಮಾರು ₹ 1,300 ಕೋಟಿ) ಎಷ್ಟು ಬೇಗ ಸಾಧ್ಯವಾಗುತ್ತದೋ ಅಷ್ಟು ಬೇಗ ಸಂದಾಯ ಮಾಡಲು ಪ್ರಯತ್ನ ಮಾಡುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು.

ಶಿಕ್ಷಕರ ವರ್ಗಾವಣೆ 2 ತಿಂಗಳೊಳಗೆ ಪೂರ್ಣ

‘ಶಿಕ್ಷಕರ ವರ್ಗಾವಣೆಗೆ ಹೊಸ ನಿಯಮ ಜಾರಿಗೆ ತಂದಿದ್ದು, ಆಕ್ಷೇಪಗಳನ್ನು ಆಹ್ವಾನಿಸಲಾಗಿದೆ. ಎಲ್ಲವನ್ನೂ ಪರಿಶೀಲಿಸಿ ಯಾವ ಪ್ರದೇಶಕ್ಕೂ ಅನ್ಯಾಯ ಆಗದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುವುದು. ಎರಡು ತಿಂಗಳೊಳಗೆ ವರ್ಗಾವಣೆ ಪ್ರಕ್ರಿಯೆ ಕೊನೆಗೊಳಿಸಲಾಗುವುದು‘ ಎಂದು ಸಚಿವರು ಹೇಳಿದರು.‌

ಸಹಾಯವಾಣಿ ಸಂಖ್ಯೆ: 080–23320311, 6364728784

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.