ADVERTISEMENT

ಈ ವರ್ಷವೇ 2ನೇ ಜೊತೆ ಸಮವಸ್ತ್ರ: ಸಚಿವ ಸುರೇಶ್‌ ಕುಮಾರ್‌

ಶಿಕ್ಷಕರ ಸಂಘದೊಂದಿಗೆ ಅ.4ರಂದು ಸಭೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 19:45 IST
Last Updated 27 ಸೆಪ್ಟೆಂಬರ್ 2019, 19:45 IST
ಬೆಂಗಳೂರಿನಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪದಾಧಿಕಾರಿಗಳೊಂದಿಗೆ ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್ ಸಂವಾದ ನಡೆಸಿದರು.  ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪದಾಧಿಕಾರಿಗಳೊಂದಿಗೆ ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್ ಸಂವಾದ ನಡೆಸಿದರು.  ಪ್ರಜಾವಾಣಿ ಚಿತ್ರ   

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಈ ವರ್ಷ ಎರಡನೇ ಜೊತೆ ಸಮವಸ್ತ್ರ ನೀಡ ಲಾಗುವುದು ಹಾಗೂ ಶಿಕ್ಷಕರ ವಿವಿಧ ಬೇಡಿಕೆಗಳ ಕುರಿತಂತೆ ಅಕ್ಟೋಬರ್ 4ರಂದು ಸಭೆ ನಡೆಸಲಾಗುವುದು ಎಂದುಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್ ಹೇಳಿದರು.

ಇಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಹಾಸಭೆಯಲ್ಲಿ ಪಾಲ್ಗೊಂಡ ಅವರು, ‘2ನೇ ಜೊತೆ ಸಮವಸ್ತ್ರ ನೀಡ ಬೇಕೆಂಬುದು ಸರ್ಕಾರದ ನಿರ್ಧಾರ. ಈ ವರ್ಷವೇ ಅದನ್ನು ನೀಡಲು ಬದ್ಧರಾಗಿ ದ್ದೇವೆ.ಹಣಕಾಸು ಇಲಾಖೆಯ ಜತೆಗೆ ಚರ್ಚಿಸಲಾಗಿದೆ, ಮುಖ್ಯಮಂತ್ರಿಗಳ ಜತೆಗೂ ಮಾತನಾಡಿದ್ದೇನೆ. ಈ ವರ್ಷವೇ2ನೇ ಜೊತೆ ಸಮವಸ್ತ್ರ ಕೊಡಿಸಲುಎಲ್ಲಾ ಕ್ರಮ ಕೈಗೊಳ್ಳಲಾಗುವುದು. ಗುರುವಾರ ನಾನು ನೀಡಿದ ಹೇಳಿಕೆಯಲ್ಲಿ ಒಂದಿಷ್ಟು ವ್ಯತ್ಯಾಸವಾಗಿದೆ’ ಎಂದರು.

(ಗುರುವಾರ ಹೇಳಿಕೆ ನೀಡಿದ್ದ ಸಚಿವರು, ಹಣಕಾಸಿನ ಕೊರತೆ ಇರುವ ಕಾರಣ ಈ ವರ್ಷ ಇನ್ನೊಂದು ಜೊತೆ ಸಮವಸ್ತ್ರ ನೀಡುವುದಿಲ್ಲ ಎಂದು ಹೇಳಿದ್ದರು).

ADVERTISEMENT

‘ನಾನು ಶಿಕ್ಷಣ ಸಚಿವನಾಗಿ ಒಂದು ತಿಂಗಳಾಗಿದೆ. ಪ್ರತಿ ದಿನ ಹಲವು ಸಮಸ್ಯೆಗಳು ನನ್ನ ಗಮನಕ್ಕೆ ಬರುತ್ತಿವೆ. ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರಬೇಕು, ಜೂನ್‌ ಒಳಗೆ ವರ್ಗಾವಣೆ ಪ್ರಕ್ರಿಯೆ ಮುಗಿಯಬೇಕು ಎಂಬುದು ನನ್ನ ನಿಲುವು’ ಎಂದರು.

ಸಂಘದ ಅಧ್ಯಕ್ಷ ವಿ.ಎಂ. ನಾರಾಯಣಸ್ವಾಮಿ, ಪ್ರಧಾನ ಕಾರ್ಯ ದರ್ಶಿ ಚಂದ್ರಶೇಖರ ನುಗ್ಲಿ ಅವರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸಚಿವರಿಗೆ ಮನವಿ ಸಲ್ಲಿಸಿದರು.

ಶಿಕ್ಷಕರ ಬೇಡಿಕೆಗಳು

*ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಪದವೀಧರ ಶಿಕ್ಷಕರನ್ನು ಪದವೀಧರ ಸಹ ಶಿಕ್ಷಕರೆಂದು ಪರಿಗಣಿಸಬೇಕು

*ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು

*ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಯಲ್ಲಿರುವ ನ್ಯೂನತೆ ಸರಿಪಡಿಸಬೇಕು

*6ನೇ ವೇತನ ಆಯೋಗದ ಅಂತಿಮ ವರದಿಯ ಶಿಫಾರಸಿನ ಪ್ರಕಾರ ಮುಖ್ಯ ಗುರುಗಳಿಗೆ ಬಡ್ತಿ ನೀಡಬೇಕು

*ಪ್ರಾಥಮಿ ಶಾಲಾ ಶಿಕ್ಷಕರಿಗೆ ಉಪನಿರ್ದೇಶಕರ ಹುದ್ದೆವರೆಗೂ ಬಡ್ತಿ ನೀಡಬೇಕು

*ಗ್ರಾಮೀಣ ಕೃಪಾಂಕ ಶಿಕ್ಷಕರ ವಜಾ ಆದ ಸೇವೆಯನ್ನು ಸತತ ಸೇವೆ ಎಂದು ಪರಿಗಣಿಸಿ ಆರ್ಥಿಕ ಮತ್ತು ಇತರ ಸೇವಾ ಸೌಲಭ್ಯ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.