ADVERTISEMENT

ಗಂಗಾಧರ ಚಡಚಣ ನಿಗೂಢ ಕೊಲೆ ಪ್ರಕರಣ: ವೈಜ್ಞಾನಿಕವಾಗಿ ಸಾಕ್ಷಿ ಸಂಗ್ರಹಿಸಿದ ಸಿಐಡಿ

ಐವರು ಪೊಲೀಸರು ಸೇರಿ 15 ಆರೋಪಿಗಳ ವಿರುದ್ಧ ಸಿಐಡಿ ದೋಷಾರೋಪಣಾ ಪಟ್ಟಿ ಸಲ್ಲಿಕೆ

ಡಿ.ಬಿ, ನಾಗರಾಜ
Published 7 ಸೆಪ್ಟೆಂಬರ್ 2018, 19:30 IST
Last Updated 7 ಸೆಪ್ಟೆಂಬರ್ 2018, 19:30 IST

ವಿಜಯಪುರ:ಭೀಮಾ ತೀರದ ರೌಡಿ ಗಂಗಾಧರ ಚಡಚಣನ ನಿಗೂಢ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಸಿಐಡಿ ತಂಡ, ಇಂಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ 373 ಪುಟಗಳ ಚಾರ್ಜ್‌ಶೀಟ್‌(ದೋಷಾರೋಪಣಾ ಪಟ್ಟಿ)ನ್ನು ಶುಕ್ರವಾರ ಸಲ್ಲಿಸಿದೆ.

ಕೊಲೆಯಲ್ಲಿ ಐವರು ಪೊಲೀಸರ ಪಾತ್ರವಿರುವುದು ಸಿಐಡಿ ತನಿಖೆಯಲ್ಲಿ ಸಾಬೀತಾಗಿದೆ. ಕೊಲೆ ನಡೆದ ಅವಧಿಯಲ್ಲಿ ಚಡಚಣ ಸಿಪಿಐ ಆಗಿದ್ದ ಎಂ.ಬಿ.ಅಸೋಡೆ (ಇದೀಗ ನಾಪತ್ತೆ) ಪ್ರಕರಣದಲ್ಲಿ 13ನೇ ಆರೋಪಿಯಾಗಿದ್ದರೆ, ಪಿಎಸ್‌ಐ ಗೋಪಾಲ ಹಳ್ಳೂರ 12ನೇ ಆರೋಪಿ. ಪೊಲೀಸ್‌ ಕಾನ್‌ಸ್ಟೆಬಲ್‌ಗಳಾದ ಸಿದ್ಧಾರೂಢ ರೂಗಿ, ಚಂದ್ರಶೇಖರ ಜಾಧವ, ಗೆದ್ದೆಪ್ಪ ನಾಯ್ಕೋಡಿ ಕ್ರಮವಾಗಿ 9, 10, 11ನೇ ಆರೋಪಿಗಳಾಗಿದ್ದಾರೆ. ಒಟ್ಟು 15 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ.

ಕಾಂಗ್ರೆಸ್‌ ಮುಖಂಡ, ಕೊಲೆಯ ಸೂತ್ರಧಾರಿ ಮಹಾದೇವ ಭೈರಗೊಂಡ ಮೊದಲ ಆರೋಪಿಯಾಗಿದ್ದು, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸುವ ಮುನ್ನವೇ, ಈತನನ್ನು ಬಳ್ಳಾರಿಯ ಜೈಲಿಗೂ, ಬಂಧಿತ ಪಿಎಸ್‌ಐ ಗೋಪಾಲ ಹಳ್ಳೂರನನ್ನು ಕಲಬುರ್ಗಿ ಜೈಲಿಗೂ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ADVERTISEMENT

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ ಸೇರಿ ಇನ್ನೂ ಆರು ಆರೋಪಿಗಳನ್ನು ಬಂಧಿಸಬೇಕಿದೆ. ಇವರನ್ನು ಬಂಧಿಸಿದ ಬಳಿಕ ಹೆಚ್ಚುವರಿ ಚಾರ್ಜ್‌ಶೀಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ’ ಎಂದು ಸಿಐಡಿ ಎಡಿಜಿಪಿ ಚರಣ್‌ರೆಡ್ಡಿ ತಿಳಿಸಿದರು.

ಕಲ್ಲೇ ಪ್ರಮುಖ ಸಾಕ್ಷಿ:

‘ಗಂಗಾಧರ ಚಡಚಣನ ಕೊಲೆ ಸಾಬೀತಿಗಾಗಿ ವೈಜ್ಞಾನಿಕವಾಗಿ ಮಾಹಿತಿ, ಸಾಕ್ಷಿ ಸಂಗ್ರಹಿಸಲಾಗಿದೆ. ಈ ಪ್ರಕರಣದಲ್ಲಿ ಕಲ್ಲಿನ ತುಣುಕಿಗೆ ಮೆತ್ತಿಕೊಂಡಿದ್ದ ರಕ್ತದ ಮಾದರಿ ಪ್ರಮುಖ ಪಾತ್ರ ವಹಿಸಲಿದೆ’ ಎಂದು ತನಿಖಾ ತಂಡದಲ್ಲಿದ್ದ ಸಿಐಡಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಗಂಗಾಧರನ ಮೃತದೇಹದ ಯಾವೊಂದು ಅವಯವ ಇದೂವರೆಗೂ ಸಿಕ್ಕಿಲ್ಲ. ಹತ್ಯೆಯಲ್ಲಿ ಭಾಗಿಯಾಗಿರುವ ಪೊಲೀಸರು ಸೇರಿದಂತೆ 12 ಮಂದಿಯನ್ನು ಪ್ರಮುಖ ಸಾಕ್ಷಿಗಳನ್ನಾಗಿ ಪರಿಗಣಿಸಲಾಗಿದೆ. ಇದರಲ್ಲಿ ಮಹಾದೇವ ಭೈರಗೊಂಡ ಹಾಗೂ ಎನ್‌ಕೌಂಟರ್‌ನಲ್ಲಿ ಬಲಿಯಾದ ಧರ್ಮರಾಜ ಚಡಚಣನ ಸಹಚರರು ಇದ್ದಾರೆ’ ಎಂದು ಅವರು ಹೇಳಿದರು.

‘ಉಮರಾಣಿ–ಕೆರೂರು ನಡುವಿನ ತೊಗರಿ ಹೊಲದೊಳಗೆ ಗಂಗಾಧರನನ್ನು ತುಂಡರಿಸಲಾಗಿದೆ. ಕೈ–ಕಾಲು, ದೇಹವನ್ನು ಕತ್ತರಿಸಿ 6 ಬ್ಯಾಗ್‌ಗಳಿಗೆ ತುಂಬಿ ಹಿಂಗಣಿ ಬ್ಯಾರೇಜ್‌ನಲ್ಲಿ ಭೀಮೆಯ ಒಡಲಿಗೆ ಎಸೆಯಲಾಗಿದೆ. ಇದರ ಯಾವೊಂದು ಅವಶೇಷ ಸಿಕ್ಕಿಲ್ಲ. ಆದರೆ ಗಂಗಾಧರನನ್ನು ಕತ್ತರಿಸಿ ಕೊಂದ ಜಾಗದಲ್ಲಿ ಕಲ್ಲಿನ ತುಣುಕುಗಳಿಗೆ ರಕ್ತದ ಕಲೆ ಅಂಟಿಕೊಂಡಿತ್ತು.

ಕೊಲೆ ನಡೆದ ಹಲವು ತಿಂಗಳ ಬಳಿಕ ಸಿಐಡಿ ತಂಡ ಈ ಕಲ್ಲಿನ ತುಣುಕು, ಮಣ್ಣನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ಸಾಕ್ಷಿ ಸಂಗ್ರಹಣೆಗೆ ಮುಂದಾಗಿತ್ತು. ಕಲ್ಲಿನ ತುಣುಕಿನಲ್ಲಿ ಪತ್ತೆಯಾದ ರಕ್ತದ ಮಾದರಿಗೂ, ಗಂಗಾಧರ ಚಡಚಣನ ಪುತ್ರನ ಡಿಎನ್‌ಎ ಮಾದರಿಗೂ ಹೊಂದಾಣಿಕೆಯಾಗಿದ್ದರಿಂದ ಕೊಲೆಯನ್ನು ದೃಢೀಕರಿಸಲಾಗಿದೆ. ಇದೇ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಮಣ್ಣಿನ ಪರೀಕ್ಷೆಯ ವರದಿ ಇನ್ನೂ ಬಂದಿಲ್ಲ. ಹತ್ಯೆ ನಡೆಸಲಿಕ್ಕಾಗಿಯೇ ಮಹಾದೇವ ಭೈರಗೊಂಡ ಸಿಪಿಐ ಎಂ.ಬಿ.ಅಸೋಡೆ, ಪಿಎಸ್‌ಐ ಗೋಪಾಲ ಹಳ್ಳೂರಗೆ ಕೋಟಿ, ಕೋಟಿ ಮೊತ್ತ ಕೊಟ್ಟಿರುವುದು ತನಿಖೆಯಲ್ಲಿ ಸಾಬೀತಾಗಿದೆ.

ಧರ್ಮರಾಜ ಚಡಚಣ ತನ್ನನ್ನು ಕೊಲೆಗೈಯಲಿದ್ದಾನೆ ಎಂದೇ ಸಹೋದರರಿಬ್ಬರನ್ನು ಕೊಲ್ಲಿಸಲು ಪೊಲೀಸರ ಜತೆ ಒಪ್ಪಂದ ಮಾಡಿಕೊಂಡಿದ್ದೆ ಎಂಬುದನ್ನು ತನಿಖೆಯಲ್ಲಿ ಮಹಾದೇವ ಭೈರಗೊಂಡ ಒಪ್ಪಿಕೊಂಡಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ 70 ಜನರಿಂದ ಸಾಕ್ಷಿ ಸಂಗ್ರಹಿಸಿದ್ದೇವೆ’ ಎಂದು ಅವರು ಹೇಳಿದರು.

**

ಹತ್ಯೆಗೆ ಸಂಬಂಧಿಸಿದಂತೆ ವೈಜ್ಞಾನಿಕವಾಗಿ ಸಾಕ್ಷಿ ಸಂಗ್ರಹಿಸಿದ್ದು, ಚಾರ್ಜ್‌ಶೀಟ್‌ನಲ್ಲಿ ಎಲ್ಲವನ್ನೂ ನಮೂದಿಸಲಾಗಿದೆ. ನಾಪತ್ತೆಯಾಗಿರುವ ಆರು ಮಂದಿಯನ್ನು ಬಂಧಿಸಿದ ಬಳಿಕ ಹೆಚ್ಚುವರಿ ಚಾರ್ಜ್‌ಶಿಟ್‌ ಸಲ್ಲಿಸುತ್ತೇವೆ.

-ಚರಣ್‌ರೆಡ್ಡಿ, ಎಡಿಜಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.