ADVERTISEMENT

ಕೆಆರ್‌ಎಸ್‌: ಗಣಿ ಪ್ರದೇಶಕ್ಕೆ ತಜ್ಞರ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 13:34 IST
Last Updated 3 ಮಾರ್ಚ್ 2021, 13:34 IST
ಕೆಆರ್‌ಎಸ್‌ ಸಮೀಪದ ಗಣಿ ಪ್ರದೇಶದಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿರುವುದು
ಕೆಆರ್‌ಎಸ್‌ ಸಮೀಪದ ಗಣಿ ಪ್ರದೇಶದಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿರುವುದು   

ಮಂಡ್ಯ: ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಜಲಾಶಯಕ್ಕೆ ಉಂಟಾಗುತ್ತಿರುವ ಪರಿಣಾಮಗಳ ಬಗ್ಗೆ ಜಾರ್ಖಂಡ್‌, ಧನ್‌ಬಾದ್‌ ಮೂಲದ ಸಿಎಸ್‌ಐಆರ್‌–ಸಿಐಎಂಎಫ್‌ಆರ್‌ (ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧಾನಾ ಮಂಡಳಿ– ಗಣಿ ಮತ್ತು ಇಂಧನ ಸಂಶೋಧನಾ ಕೇಂದ್ರೀಯ ಸಂಸ್ಥೆ) ವಿಜ್ಞಾನಿಗಳ ತಂಡ ಬುಧವಾರ ಗಣಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಅಧ್ಯಯನ ಗುರುವಾರವೂ ಮುಂದುವರಿಯಲಿದೆ. ಇಬ್ಬರು ವಿಜ್ಞಾನಿಗಳ ನೇತೃತ್ವದಲ್ಲಿ ತಂಡ ಜಲಾಶಯದಿಂದ 20 ಕಿ.ಮೀ ವ್ಯಾಪ್ತಿಯಲ್ಲಿರುವ ಕ್ರಷರ್‌ಗಳ ಬಳಿ ತೆರಳಿ ಪರಿಶೀಲನೆ ನಡೆಸಿತು. ಶ್ರೀರಂಗಪಟ್ಟಣ ತಾಲ್ಲೂಕಿ ನೀಲನಕೊಪ್ಪಲು, ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟ, ಬನ್ನಂಗಾಡಿ ಗಣಿ ಪ್ರದೇಶದಲ್ಲಿ ಅಧ್ಯಯನ ನಡೆಯಿತು.

ಅವರೊಂದಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ಟಿ.ವಿ.ಪುಷ್ಪಾ, ಕಾವೇರಿ ನೀರಾವರಿ ನಿಗಮದ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ವಿಜಯ್‌ಕುಮಾರ್‌ ಹಾಗೂ ಸ್ಥಳೀಯ ಪೊಲೀಸರು ಹಾಜರಿದ್ದರು.

ADVERTISEMENT

20 ಕಿ.ಮೀ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲು ಸ್ಫೋಟದಿಂದಾಗಿ ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಜ್ಞರು 2018ರಲ್ಲಿ ವರದಿ ಸಲ್ಲಿಸಿದ್ದರು. ವರದಿ ಆಧಾರದ ಮೇಲೆ 2019ರಲ್ಲಿ ಪುಣೆಯ ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನಾ ಕೇಂದ್ರದ (ಸಿಡಬ್ಲ್ಯುಪಿಆರ್‌ಎಸ್‌) ಭೂವಿಜ್ಞಾನಿಗಳ ತಂಡ ಪರೀಕ್ಷಾರ್ಥ ಸ್ಫೋಟಕ್ಕೆ ಮುಂದಾಗಿತ್ತು.

ಆದರೆ ಸ್ಥಳೀಯ ರೈತ ಮುಖಂಡರು ಪರೀಕ್ಷಾರ್ಥ ಸ್ಫೋಟ ಖಂಡಿಸಿ ಭೂವಿಜ್ಞಾನಿಗಳ ವಿರುದ್ಧ ಗೋಬ್ಯಾಕ್‌ ಚಳವಳಿ ನಡೆಸಿದ್ದರು. ಇದರಿಂದ ಭೂವಿಜ್ಞಾನಿಗಳ ತಂಡ ವಾಪಸ್‌ ತೆರಳಿತ್ತು. ಈಗ ಮತ್ತೆ ಕಾವೇರಿ ನೀರಾವರಿ ನಿಗಮದ ಮನವಿ ಮೇರೆಗೆ ಸಿಎಸ್‌ಐಆರ್‌–ಸಿಐಎಂಎಫ್‌ಆರ್‌ ತಂಡ ಅಧ್ಯಯನ ಆರಂಭಿಸಿದೆ.

‘ಸದ್ಯಕ್ಕೆ ವಿಜ್ಞಾನಿಗಳ ತಂಡ ಗಣಿ ಪ್ರದೇಶದಲ್ಲಿ ಪರಿಶೀಲನೆ ನಡೆಸಿದೆ. ಪರೀಕ್ಷಾರ್ಥ ಸ್ಫೋಟದ ಕುರಿತು ಮುಂದೆ ನಿರ್ಧಾರವಾಗಲಿದೆ’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವಥಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.