ಎಚ್.ಸಿ. ಮಹದೇವಪ್ಪ
ಬೆಂಗಳೂರು: ‘ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಟಿಎಸ್‌ಪಿ (ಬುಡಕಟ್ಟು ಉಪಯೋಜನೆ) ಕಾಯ್ದೆಯ ನಿಯಮಾವಳಿ ಅನ್ವಯವೇ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.
ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಟ ಸಮುದಾಯದ ಜನರ ಅನುದಾನ ಬಳಕೆಯ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿಗರು ಹೋರಾಟ ನಡೆಸುವುದಾಗಿ ಹೇಳಿರುವುದು ಅತ್ಯಂತ ಹಾಸ್ಯಾಸ್ಪದ’ ಎಂದರು.
‘ಬಿಜೆಪಿಯವರು ಈ ಹಿಂದೆ ಕಾಯ್ದೆಯ ಸೆಕ್ಷನ್ 7ಡಿ ಬಳಸಿಕೊಂಡು ₹ 10 ಸಾವಿರ ಕೋಟಿಯನ್ನು ‘ಡೀಮ್ಡ್ ಎಕ್ಸ್‌ಪೆಂಡಿಚರ್’ (ಪರಿಶಿಷ್ಟರ ಅಭಿವೃದ್ಧಿಗೆ ಬಳಸಲಾಗಿದೆ ಎಂದು ಪರಿಭಾವಿಸಿ) ಆಗಿ ಖರ್ಚು ಮಾಡಿದ್ದರು. ಮಹಾನಗರಪಾಲಿಕೆಯಲ್ಲೂ ವೆಚ್ಚ ಮಾಡಿದ್ದರು. ಅವರ ಮೇಲೆ ಕೇಸ್ ಹಾಕಿದ್ದೇವೆ’ ಎಂದರು.
‘ನಾವು ಅಧಿಕಾರಕ್ಕೆ ಬಂದ ನಂತರ ಸೆಕ್ಷನ್ 7ಡಿ ತೆಗೆದು ಹಾಕಿದ್ದೇವೆ. ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ತೆಗೆದಿಡುವ ಹಣವನ್ನು ಆ ಸಮುದಾಯದ ಕಲ್ಯಾಣಕ್ಕೆ ಬಳಕೆ ಮಾಡುತ್ತಿದ್ದೇವೆ. ಕಾಯ್ದೆಯಲ್ಲಿರುವ ನಿಯಮದ ಪ್ರಕಾರವೇ ಗ್ಯಾರಂಟಿ ಯೋಜನೆಗಳಿಗೂ ಖರ್ಚು ಮಾಡುತ್ತಿದ್ದೇವೆ’ ಎಂದು ಸ್ಪಷ್ಟನೆ ನೀಡಿದರು.
‘ಬಿಜೆಪಿಯವರು ಈ ವಿಚಾರದಲ್ಲಿ ಪದೇ ಪದೇ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಬದ್ಧತೆ ಇಲ್ಲ. ಅಷ್ಟು ಬದ್ಧತೆ ಇದ್ದರೆ, ಅವರದೇ ನೇತೃತ್ವದ ಕೇಂದ್ರ ಸರ್ಕಾರ ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯನ್ನು ಜಾರಿ ಮಾಡಲಿ. ದಲಿತರ ಹಣವನ್ನೇ ಅನ್ಯ ಉದ್ದೇಶಗಳಿಗೆ ಬಿಜೆಪಿಯವರು ಬಳಕೆ ಮಾಡಿದ್ದಾರೆ. ಅವರಿಗೆ ಬದ್ಧತೆ ಇದೆಯೇ’ ಎಂದು ಪ್ರಶ್ನಿಸಿದರು.
‘ಗ್ಯಾರಂಟಿ ಯೋಜನೆಯಲ್ಲಿ ಎಸ್‌ಸಿ, ಎಸ್‌ಟಿ ಫಲಾನುಭವಿಗಳ ದತ್ತಾಂಶ ಪಡೆದುಕೊಂಡು ನಾವು ಹಣ ಖರ್ಚು ಮಾಡುತ್ತಿದ್ದೇವೆ. ದತ್ತಾಂಶ ಕೊಡುವಂತೆ ಗ್ಯಾರಂಟಿ ಅನುಷ್ಠಾನ ಸಮಿತಿಯವರಿಗೆ ಮತ್ತು ಮುಖ್ಯ ಕಾರ್ಯದರ್ಶಿಗೆ ತಿಳಿಸಿದ್ದೇವೆ. ನಾವು ರಾಜಕೀಯಕ್ಕಾಗಿ, ಮತ ಪಡೆಯುವ ಉದ್ದೇಶದಿಂದ ಗ್ಯಾರಂಟಿ ಯೋಜನೆ ಜಾರಿ ಮಾಡಿಲ್ಲ. ಜನರ ಅಭಿವೃದ್ಧಿಗೆ ಮಾಡಿದ್ದೇವೆ’ ಎಂದರು.
‘ಕಾಂಗ್ರೆಸ್, ಸಿದ್ದರಾಮಯ್ಯ ಮತ್ತು ನಾನು ಸೇರಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆ ಮಾಡಿರುವುದು. ಬಿಜೆಪಿಯವರು ರಾಜಕೀಯ ಮಾಡುವುದನ್ನು ಮೊದಲು ಬಿಡಲಿ’ ಎಂದೂ ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.