ADVERTISEMENT

ಹಿಂಬಡ್ತಿ ಆದೇಶ ವಾಪಸ್‌ಗೆ ಮಠಾಧೀಶರ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 19:43 IST
Last Updated 5 ಫೆಬ್ರುವರಿ 2019, 19:43 IST
ಜ್ಞಾನಪ್ರಕಾಶ ಸ್ವಾಮೀಜಿ
ಜ್ಞಾನಪ್ರಕಾಶ ಸ್ವಾಮೀಜಿ   

ಬೆಂಗಳೂರು: ‘ಬಿ.ಕೆ. ಪವಿತ್ರ ಪ್ರಕರಣದ ತೀರ್ಪು ಅನುಷ್ಠಾನದಿಂದ ಹಿಂಬಡ್ತಿಗೆ ಒಳಗಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಹಿಂಬಡ್ತಿ ಆದೇಶವನ್ನು ಹಿಂಪಡೆದುಕೊಂಡು, ಪೂರ್ವದಲ್ಲಿದ್ದ ಹುದ್ದೆಗೆ ನಿಯುಕ್ತಿಗೊಳಿಸಬೇಕು’ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಒತ್ತಾಯಿಸಿದರು.

‘ಹಿಂಬಡ್ತಿ ಬಳಿಕ ಅವಮಾನ ತಾಳಲಾರದೆ ಏಳು ಜನ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆಕೆಲಸದ ವೇಳೆ ಮರಣ ಹೊಂದುವ ನೌಕರರಿಗೆ ಸಿಗುವ ಸವಲತ್ತುಗಳನ್ನು ಒದಗಿಸಬೇಕು. ಮೀಸಲಾತಿ ಆಧಾರದಲ್ಲಿ ಬಡ್ತಿ ಹೊಂದಿದ ನೌಕರರ ಜ್ಯೇಷ್ಠತೆಯನ್ನು ಒಂದು ವೃಂದದಲ್ಲಿ ಸಲ್ಲಿಸಿದ ಸೇವಾವಧಿಯ ಆಧಾರದ ಮೇಲೆ ನಿರ್ಧರಿಸಬೇಕು’ ಎಂದು ಆಗ್ರಹಿಸಿದರು.

‘ಕಾಯ್ದೆ ಜಾರಿಯಾದರೂ ಸರ್ಕಾರ ಹಿಂಬಡ್ತಿ ಆದೇಶವನ್ನು ಹಿಂಪಡೆದುಕೊಳ್ಳುತ್ತಿಲ್ಲ.ಇತರೆ ಸಮುದಾಯಗಳ ಹಿತ ಕಾಯಲುಸಚಿವ ಎಚ್‌.ಡಿ. ರೇವಣ್ಣ ಮತ್ತು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಈ ವಿಷಯದಲ್ಲಿಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ಇಬ್ಬರ ವಿರುದ್ಧ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಸರ್ಕಾರ ಸ್ಪಂದಿಸದಿದ್ದಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಠಾಧೀಶರು ಅಧಿವೇಶನ ನಡೆಯುವ ಸಂದರ್ಭದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಚಿತ್ರದುರ್ಗದ ಛಲವಾದಿ ಪೀಠದ ಬಸವನಾಗೀದೇವ ಸ್ವಾಮೀಜಿ, ‘ಆದಷ್ಟು ಬೇಗ ಕಾಯ್ದೆ ಜಾರಿಗೊಳಿಸದಿದ್ದರೆ, ವಿಜಯಪುರದಲ್ಲಿ ನಡೆಸಲು ಉದ್ದೇಶಿಸಿರುವ ಪರಿಶಿಷ್ಟರ ಸಮಾವೇಶ ನಡೆಯಲು ಬಿಡುವುದಿಲ್ಲ. ಸಮಾಜದ ಜನರಿಗೆ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳನ್ನು ಬೆಂಬಲಿಸದಂತೆ ಕರೆ ನೀಡಬೇಕಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.