ADVERTISEMENT

ಎಸ್ಸಿ-ಎಸ್ಟಿ ಸಮುದಾಯದ ಎಲ್ಲರಿಗೂ ‘ಸಹಕಾರಿ’ ಸದಸ್ಯತ್ವ: ಮಹದೇವಪ್ಪ

ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2023, 16:29 IST
Last Updated 20 ನವೆಂಬರ್ 2023, 16:29 IST
ಡಾ.ಎಚ್‌.ಸಿ. ಮಹದೇವಪ್ಪ
ಡಾ.ಎಚ್‌.ಸಿ. ಮಹದೇವಪ್ಪ   

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಪ್ರತಿಯೊಬ್ಬ ವ್ಯಕ್ತಿಗೂ ಸಹಕಾರ ಸಂಘಗಳಲ್ಲಿ ಸದಸ್ಯತ್ವ ನೋಂದಣಿ ಮಾಡಿಸಲಾಗುವುದು. ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದ್ದಾರೆ.

ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ) ಅನುಷ್ಠಾನ ಕುರಿತು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಈ ಸಮುದಾಯ ಸಹಕಾರ ಸಂಘಗಳಲ್ಲಿ ಈವರೆಗೂ ನೋಂದಣಿ ಆಗಿಲ್ಲ. ಆದ್ದರಿಂದ ಎಲ್ಲರಿಗೂ ಸದಸ್ಯತ್ವ ನೀಡಬೇಕು ಎಂಬುದು ಸರ್ಕಾರದ ಚಿಂತನೆ. ರಾಜ್ಯದಲ್ಲಿ ಪರಿಶಿಷ್ಟ ಸಮುದಾಯದವರು 1.4 ಕೋಟಿಯಷ್ಟು ಇದ್ದಾರೆ. ಇದರಿಂದ ಈ ವರ್ಗಕ್ಕೆ ಹಲವು ಪ್ರಯೋಜನ ಆಗಲಿದೆ ಎಂದು ಅವರು ವಿವರಿಸಿದರು.

ADVERTISEMENT

ಕಳೆದ ಒಂಬತ್ತು ವರ್ಷಗಳಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಡಿ ₹2 ಲಕ್ಷ ಕೋಟಿಗೂ ಹೆಚ್ಚು ಮೊತ್ತ ಖರ್ಚಾಗಿದೆ. ಸಾಧನೆ ಆಗಿರುವುದನ್ನು ದಾಖಲೆಗಳಲ್ಲಿ ತೋರಿಸುತ್ತಾರೆ. ಆದರೆ, ವಾಸ್ತವಿಕ ಸ್ಥಿತಿ ಏನು? ಎಷ್ಟರ ಮಟ್ಟಿಗೆ ಅನುಷ್ಠಾನ ಆಗಿದೆ. ಅದರಿಂದ ಈ ವರ್ಗದವರ ಜೀವನದಲ್ಲಿ ಆಗಿರುವ ಬದಲಾವಣೆಗಳೇನು ಎಂಬುದರ ಮೌಲ್ಯಮಾಪನ ವರದಿ ನೀಡಲು ಎಲ್ಲ ಇಲಾಖೆಗಳಿಗೂ ಸೂಚಿಸಲಾಗಿದೆ. ಐಸೆಕ್‌, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದಿಂದಲೂ ಮೌಲ್ಯಮಾಪನ ನಡೆಸಲಾಗುವುದು ಎಂದು ಮಹದೇವಪ್ಪ ಹೇಳಿದರು.

ವಿವಿಧ ಇಲಾಖೆಗಳಲ್ಲಿ ಅನುಷ್ಠಾನಗೊಂಡಿರುವ ಯೋಜನೆಗಳ ದತ್ತಾಂಶ ಪೂರ್ಣ ಪ್ರಮಾಣದಲ್ಲಿ ಇಲ್ಲದಿರುವುದು ಸಭೆಯಲ್ಲಿ ಗಮನಕ್ಕೆ ಬಂದಿತು. ಆದ್ದರಿಂದ, ತಾಜಾ ದತ್ತಾಂಶವನ್ನು ಸಲ್ಲಿಸಬೇಕು. ಇದರಿಂದ ಬಿಡುಗಡೆಯಾದ ಹಣ ಮತ್ತು ಅನುಷ್ಠಾನಗೊಂಡ ಯೋಜನೆಗಳ ಮಾಹಿತಿ ಸಿಗುವುದಿಲ್ಲ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ವರ್ಗಗಳ 9 ಲಕ್ಷ ಪ್ರಕರಣಗಳಲ್ಲಿ ಸುಮಾರು ನಾಲ್ಕೂವರೆ ಲಕ್ಷ ಆಸ್ತಿಗಳ ಪೋಡಿ ಆಗಿಲ್ಲ. ಶೇ 50ರಷ್ಟು ಬಾಕಿ ಉಳಿದಿದೆ. ಆರು ತಿಂಗಳ ಒಳಗೇ ಪೋಡಿ ಮಾಡಿಕೊಡಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಿಬಿಎಂಪಿ ಸೇರಿ ಹಲವು ಜಿಲ್ಲೆಗಳಲ್ಲಿ ಪರಿಗಣಿತ ವೆಚ್ಚದ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಬಳಸಿಕೊಂಡಿರುವುದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಮನಕ್ಕೆ ಬಂದಿದೆ. ರಸ್ತೆಗಳ ಸುಧಾರಣೆಗೆ ₹4 ಕೋಟಿ, ವಿಮಾನ ನಿಲ್ದಾಣಕ್ಕೆ ₹11 ಕೋಟಿ ಹೀಗೆ ಸಾಕಷ್ಟು ಮೊತ್ತವನ್ನು ಕಾಮಗಾರಿಗೆ ಬಳಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.